ಕರ್ನಾಟಕ

karnataka

ETV Bharat / bharat

ಜಿ-20 ಶೃಂಗಸಭೆಗೆ ರಷ್ಯಾ ಬಳಿಕ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಗೈರು ಘೋಷಣೆ: ಚೀನಾ ನಡೆಗೆ ಅಮೆರಿಕದ ಬೇಸರ - ಪ್ರಧಾನಿ ಪ್ರೀಮಿಯರ್ ಲಿ ಕಿಯಾಂಗ್

ಭಾರತದಲ್ಲಿ ನಡೆಯುವ ಮಹತ್ವದ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಗೈರಾಗುವುದಾಗಿ ತಿಳಿಸಿದ್ದಾರೆ. ಇದಕ್ಕೆ ಯಾವುದೇ ಕಾರಣವನ್ನು ನೀಡಿಲ್ಲ. ಚೀನಾ ಅಧ್ಯಕ್ಷರ ಈ ನಡೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಬೇಸರ ವ್ಯಕ್ತಪಡಿಸಿದ್ದಾರೆ.

ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಗೈರು
ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಗೈರು

By ETV Bharat Karnataka Team

Published : Sep 4, 2023, 3:30 PM IST

ಬೀಜಿಂಗ್ (ಚೀನಾ):ಭಾರತದಲ್ಲಿ ನಡೆಯುವ ಜಿ20 ಶೃಂಗಸಭೆಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಗೈರು ಘೋಷಣೆ ಬಳಿಕ, ಇದೀಗ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಕೂಡ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ಅವರ ಬದಲಿಗೆ ಪ್ರಧಾನಿ ಪ್ರೀಮಿಯರ್ ಲಿ ಕಿಯಾಂಗ್ ಆಗಮಿಸಲಿದ್ದಾರೆ ಎಂದು ಚೀನಾ ವಿದೇಶಾಂಗ ಇಲಾಖೆ ಸೋಮವಾರ ತಿಳಿಸಿದೆ.

ಸೆಪ್ಟೆಂಬರ್​ 9, 10 ರಂದು ನವದೆಹಲಿಯಲ್ಲಿ ಜಿ20 ಶೃಂಗಸಭೆ ನಡೆಯಲಿದ್ದು, ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದೆ. ಭಾರತದ ಜೊತೆಗೆ ಗಡಿತಂಟೆ ಹೊಂದಿರುವ ಚೀನಾ, ಅದರ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಬರುವ ಬಗ್ಗೆ ಕುತೂಹಲ ಮೂಡಿಸಿತ್ತು. ಇದೀಗ ದೇಶದ ಪ್ರತಿನಿಧಿಯಾಗಿ ಅಧ್ಯಕ್ಷರು ಹಾಜರಾಗುವುದಿಲ್ಲ ಎಂದು ಪ್ರಕಟಿಸಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಮಾವೋ ನಿಂಗ್, ಭಾರತ ಸರ್ಕಾರದ ಆಹ್ವಾನದ ಮೇರೆಗೆ ಪ್ರಧಾನ ಮಂತ್ರಿ ಲಿ ಕಿಯಾಂಗ್ ಅವರು 18 ನೇ ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಭಾರತವು ಮೊದಲ ಬಾರಿಗೆ ಆಯೋಜಿಸಿರುವ ಉನ್ನತ ಮಟ್ಟದ ಸಮಾವೇಶದಲ್ಲಿ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಅವರು ಗೈರಾಗಲಿದ್ದಾರೆ ಎಂದು ತಿಳಿಸಿದರು. ಆದರೆ, ಇದಕ್ಕೆ ಯಾವುದೇ ಕಾರಣ ನೀಡಿಲ್ಲ.

ಆಸಿಯಾನ್​ ಶೃಂಗಕ್ಕೂ ಗೈರು:ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಅವರು, ಇಂಡೋನೇಷ್ಯಾದ ಜಕಾರ್ತಾದಲ್ಲಿ ಸೆಪ್ಟೆಂಬರ್​ 5 ರಿಂದ 8 ರವರೆಗೆ ಆಸಿಯಾನ್ (ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘ) ಮತ್ತು ಪೂರ್ವ ಏಷ್ಯಾ ಶೃಂಗಸಭೆಗಳಿಗೂ ಗೈರಾಗಲಿದ್ದಾರೆ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ. 26 ನೇ ಆಸಿಯಾನ್ ಮತ್ತು 18ನೇ ಪೂರ್ವ ಏಷ್ಯಾ ಶೃಂಗಸಭೆಯನ್ನೂ ಕ್ಸಿ ತಪ್ಪಿಸಿಕೊಳ್ಳಲಿದ್ದಾರೆ. ಬದಲಿಗೆ ಪ್ರಧಾನಿ ಲಿ ಕಿಯಾಂಗ್​ ಅವರು ಭಾಗವಹಿಸಲಿದ್ದಾರೆ. ಈ ಸಭೆಗಳ ಬಳಿಕ ಅವರು ನೇರವಾಗಿ ಭಾರತಕ್ಕೆ ಆಗಮಿಸಿ ಜಿ20 ಶೃಂಗದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ. 2021 ರಲ್ಲಿ ಇಟಲಿಯಲ್ಲಿ ನಡೆದ ಜಿ20 ಶೃಂಗದಲ್ಲೂ ಕ್ಸಿ ಕೊರೊನಾ ಕಾರಣದಿಂದಾಗಿ ಭಾಗವಹಿಸಿರಲಿಲ್ಲ.

ಪುಟಿನ್​ ಗೈರು:ಉಕ್ರೇನ್​ ಮೇಲೆ ಯುದ್ಧ ನಡೆಸುತ್ತಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಅವರು ಜಿ20 ಶೃಂಗಕ್ಕೆ ಬರಲಾಗದು ಎಂದು ಈಗಾಗಲೇ ಪ್ರಧಾನಿ ಮೋದಿ ಅವರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಉಕ್ರೇನ್​ ಯುದ್ಧದ ಮೇಲೆ ನಿಗಾ ಇಡಬೇಕಾದ ಕಾರಣ ಅವರು ಸಭೆಗೆ ಹಾಜರಾಗಲು ಸಾಧ್ಯವಿಲ್ಲ. ವಿಡಿಯೋ ಕಾನ್ಫ್​ರೆನ್ಸ್​ ಮೂಲಕ ಭಾಗವಹಿಸುವುದಾಗಿ ತಿಳಿಸಿದ್ದಾರೆ. ರಷ್ಯಾ ಬಳಿಕ ಚೀನಾ ಅಧ್ಯಕ್ಷರೂ ಗೈರಾಗುತ್ತಿದ್ದು ಎರಡು ದೊಡ್ಡ ರಾಷ್ಟ್ರಗಳು ಅನುಪಸ್ಥಿತಿ ಕಾಡಲಿದೆ.

ಕ್ಸಿ ಗೈರಿಗೆ ಬೈಡನ್​ ಬೇಸರ:ಭಾರತದಲ್ಲಿ ನಡೆಯುವ ಜಿ20 ಶೃಂಗಸಭೆಗೆ ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್​ ಗೈರಾಗುವುದಾಗಿ ಘೋಷಿಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಬೇಸರ ವ್ಯಕ್ತಪಡಿಸಿದ್ದಾರೆ. ನಾನು ಭಾರತ ಪ್ರವಾಸವನ್ನು ಎದುರು ನೋಡುತ್ತಿದ್ದೇನೆ. ಆದರೆ, ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಶೃಂಗಸಭೆಯಲ್ಲಿ ಭಾಗವಹಿಸದಿರುವ ಬಗ್ಗೆ ನಿರಾಶೆಗೊಂಡಿದ್ದೇನೆ ಎಂದು ಹೇಳಿದ್ದಾರೆ. ಅಮೆರಿಕ ಅಧ್ಯಕ್ಷರು ಜಿ20 ಶೃಂಗಸಭೆಯಲ್ಲಿ ಭಾಗವಹಿಸಲು ಸೆಪ್ಟೆಂಬರ್ 7 ರಂದು ಭಾರತಕ್ಕೆ ಪ್ರಯಾಣಿಸಲಿದ್ದಾರೆ. ಸೆಪ್ಟೆಂಬರ್ 8 ರಂದು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ ಎಂದು ಶ್ವೇತಭವನ ಶುಕ್ರವಾರ ಪ್ರಕಟಿಸಿದೆ.(ಪಿಟಿಐ)

ಇದನ್ನೂ ಓದಿ:Nabard Recruitment: ನಬಾರ್ಡ್​ನಲ್ಲಿ 150 ಅಸಿಸ್ಟಂಟ್​ ಮ್ಯಾನೇಜರ್​ ಹುದ್ದೆ ನೇಮಕಾತಿ; ಪದವಿ ಆದವರಿಗೆ ಅವಕಾಶ

ABOUT THE AUTHOR

...view details