ನವದೆಹಲಿ: ಚೀನಾ ಸಾಲದ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಹದ್ದಿನ ಕಣ್ಣಿಟ್ಟಿದೆ. ಈ ಕೇಸ್ಗೆ ಸಂಬಂಧಿಸಿದಂತೆ ತನಿಖೆ ತೀವ್ರಗೊಳಿಸಿದೆ. ಇತ್ತೀಚೆಗೆ ಬೆಂಗಳೂರಿನ ಐದು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದ್ದು, ಅಪಾರ ಪ್ರಮಾಣದ ಹಣವನ್ನು ವಶಕ್ಕೆ ಪಡೆಯಲಾಗಿದೆ ಎಂದು ಇಡಿ ಅಧಿಕಾರಿಗಳು ತಿಳಿಸಿದ್ದಾರೆ.
ಮೊಬೈಲ್ ಆ್ಯಪ್‌ಗಳ ಮೂಲಕ ಸಣ್ಣ ಮೊತ್ತದ ಸಾಲ ಪಡೆದ ಸಾರ್ವಜನಿಕರಿಗೆ ಸುಲಿಗೆ ಮತ್ತು ಕಿರುಕುಳದಲ್ಲಿ ತೊಡಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವಾರು ಸಂಸ್ಥೆಗಳು ಮತ್ತು ವ್ಯಕ್ತಿಗಳ ವಿರುದ್ಧ ಬೆಂಗಳೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ 18 ಎಫ್‌ಐಆರ್‌ಗಳನ್ನು ಆಧರಿಸಿ, ಇಡಿ ಬೆಂಗಳೂರಿನ ಪ್ರಮುಖ ಐದು ಸ್ಥಳಗಳ ಮೇಲೆ ದಾಳಿ ನಡೆಸಿ ಸುಮಾರು 78 ಕೋಟಿ ರೂ ವಶಕ್ಕೆ ಪಡೆದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಡಿ ತನಿಖೆ ವೇಳೆ ಸಾಲ ನೀಡುವ ಐದು ಘಟಕಗಳು ಪತ್ತೆಯಾಗಿದ್ದು, ಇವುಗಳನ್ನು ಚೀನಾದ ಪ್ರಜೆಗಳು ನಿಯಂತ್ರಿಸುತ್ತಾರೆ ಎಂದು ತಿಳಿದುಬಂದಿದೆ. ಭಾರತೀಯರ ನಕಲಿ ದಾಖಲೆಗಳನ್ನು ಬಳಕೆ ಮಾಡಿಕೊಂಡು ಈ ಘಟಕಗಳ ಕಾರ್ಯಾಚರಣೆ ನಡೆಯುತ್ತದೆ ಎಂದು ತನಿಖೆ ವೇಳೆ ಬಯಲಾಗಿದೆ.