ಬೀಜಿಂಗ್( ಚೀನಾ): ತಂತ್ರಜ್ಞಾನ ಒಂದು ದೇಶ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ತಂತ್ರಜ್ಞಾನ ಬೆಳದಂತೆ ದೇಶಗಳಿಗೆ ಎಲ್ಲ ರೀತಿಯಲ್ಲೂ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ. ಇಂದು ಪ್ರತಿಯೊಂದು ಕ್ಷೇತ್ರವು ತಂತ್ರಜ್ಞಾನದೊಂದಿಗೆ ಬೆಸೆದುಕೊಂಡಿದೆ. ಹೀಗಾಗಿ ಎಲ್ಲ ದೇಶಗಳು ತಂತ್ರಜ್ಞಾನ ಮತ್ತು ವೈಜ್ಞಾನಿಕ ಅಭಿವೃದ್ಧಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿವೆ.
ಒಂದು ಕಾಲದಲ್ಲಿ ತಂತ್ರಜ್ಞಾನ ಮತ್ತು ವೈಜ್ಞಾನಿಕ ಅಭಿವೃದ್ಧಿಯ ಓಟದಲ್ಲಿ ಅಮೇರಿಕಾ, ಜರ್ಮನಿ, ಬ್ರಿಟನ್ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳು ಮುಂಚೂಣಿಯಲ್ಲಿದ್ದವು. ಆದರೆ ಇಂದು ಬದಲಾದ ಪರಿಸ್ಥಿತಿಯಲ್ಲಿ ಉನ್ನತ ತಂತ್ರಜ್ಞಾನಗಳ ಅಭಿವೃಧ್ದಿಯಲ್ಲಿ ಚೀನಾ ಜಗತ್ತಿನಲ್ಲೇ ತನ್ನ ಪ್ರಾಬಲ್ಯ ಸಾಧಿಸುತ್ತಿದೆ. ಈ ಬಗ್ಗೆ ಆಸ್ಟ್ರೇಲಿಯಾದ ಥಿಂಕ್ ಟ್ಯಾಂಕ್ ಆಸ್ಟ್ರೇಲಿಯನ್ ಸ್ಟ್ರಾಟೆಜಿಕ್ ಪಾಲಿಸಿ ಇನ್‌ಸ್ಟಿಟ್ಯೂಟ್ ಸಂಸ್ಥೆಯು ಒಂದು ವರ್ಷದ ಅಧ್ಯಯನದ ನಂತರ ಈ ತೀರ್ಮಾನಕ್ಕೆ ಬಂದಿದೆ.
ತಂತ್ರಜ್ಞಾನ ಕ್ಷೇತ್ರದಲ್ಲಿ ಚೀನಾದ ಪ್ರಾಬಲ್ಯ :ಈ ಅಧ್ಯಯನದ ಪ್ರಕಾರ, ಈ ಸಂಸ್ಥೆಯು ಸುಮಾರು 44 ಜಾಗತಿಕ ತಂತ್ರಜ್ಞಾನಗಳ ಬಗ್ಗೆ ಅಧ್ಯಯನ ನಡೆಸಿದೆ. ಪ್ರಸ್ತುತ ಜಗತ್ತನ್ನು ಸುಧಾರಿಸುವಲ್ಲಿ ಈ ತಂತ್ರಜ್ಞಾನಗಳು ಬಹಳ ಪರಿಣಾಮಕಾರಿಯಾಗಿರುವವು ಎಂದು ಸಂಸ್ಥೆ ಹೇಳಿದೆ. ಈ ಸಂಸ್ಥೆಯ ಅಧ್ಯಯನದ ಪ್ರಕಾರ, ಈ 44 ತಂತ್ರಜ್ಞಾನಗಳಲ್ಲಿ ಚೀನಾ 37 ತಂತ್ರಜ್ಞಾನಗಳಲ್ಲಿ ಮುಂಚೂಣಿಯಲ್ಲಿದೆ. ಈ ತಂತ್ರಜ್ಞಾನಗಳು ಎಲೆಕ್ಟ್ರಿಕ್ ಬ್ಯಾಟರಿಗಳು, ಹೈಪರ್‌ಸಾನಿಕ್ಸ್, ಸುಧಾರಿತ ರೇಡಿಯೊ ಫ್ರೀಕ್ವೆನ್ಸಿ ಸಂವಹನ ಸೇವೆಗಳಾದ 5G ಮತ್ತು 6G ಗಳನ್ನು ಒಳಗೊಂಡಿದೆ ಎಂದು ಸಂಸ್ಥೆ ಹೇಳಿದೆ.
ಅಧ್ಯಯನದ ವರದಿ ಪ್ರಕಾರ, ಅಮೆರಿಕ ಮತ್ತು ಇತರ ಪಾಶ್ಚಿಮಾತ್ಯ ದೇಶಗಳು ಉನ್ನತ ತಂತ್ರಜ್ಞಾನ ಅಭಿವೃದ್ಧಿಗೆ ಶ್ರಮಿಸುತ್ತಿಲ್ಲ ಎಂದು ಅರ್ಥವಲ್ಲ. ಬದಲಿಗೆ ಈ ದೇಶಗಳು ಪ್ರಪಂಚದಾದ್ಯಂತ ಇರುವ ಪ್ರತಿಭೆಗಳನ್ನು ಆಕರ್ಷಿಸಿ ತಮ್ಮ ಪ್ರತಿಭೆಯನ್ನು ಅಭಿವೃದ್ಧಿಪಡಿಸಲು ಪ್ರಯತ್ನಿಸುತ್ತಿವೆ. ಇದಕ್ಕಾಗಿ ಸಾಕಷ್ಟು ಹಣವನ್ನು ಹೂಡಿಕೆ ಮಾಡುತ್ತಿದೆ ಎಂದು ಹೇಳಿದೆ. ಇದರ ಹೊರತಾಗಿಯೂ, ಈ ಎಲ್ಲಾ ದೇಶಗಳು ಚೀನಾಕ್ಕಿಂತ ಹಿಂದುಳಿದಿವೆ ಎಂದು ಅದು ಅಭಿಪ್ರಾಯಪಟ್ಟಿದೆ.