ನವದೆಹಲಿ:ಕಳೆದ ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಅರುಣಾಚಲ ಪ್ರದೇಶದ 17 ವರ್ಷದ ಬಾಲಕನ ಪತ್ತೆಗೆ ಭಾರತೀಯ ಸೇನೆ ಚೀನಾದ ನೆರವು ಕೋರಿತ್ತು. ಇದೀಗ ನಾಪತ್ತೆಯಾಗಿರುವ ಬಾಲಕನನ್ನು ಪತ್ತೆ ಮಾಡಿರುವುದಾಗಿ ಚೀನಾ ಸೇನೆ ತಿಳಿಸಿದೆ ಎಂದು ತೇಜ್‌ಪುರದ ರಕ್ಷಣಾ ಸಚಿವಾಲಯದ ಪಿಆರ್‌ಒ ಮಾಹಿತಿ ನೀಡಿದ್ದಾರೆ.
ಅರುಣಾಚಲ ಪ್ರದೇಶದಿಂದ ನಾಪತ್ತೆಯಾದ ಬಾಲಕನನ್ನು ಪತ್ತೆ ಹಚ್ಚಿರುವುದಾಗಿ ಚೀನಾ ಸೇನೆಯು ನಮಗೆ ತಿಳಿಸಿದೆ. ಆತನನ್ನು ಬಿಡುಗಡೆ ಮಾಡುವ ಮತ್ತು ಭಾರತಕ್ಕೆ ಹಿಂದಿರುಗಿಸುವ ಪ್ರಕ್ರಿಯೆ ನಡೆಯುತ್ತಿದೆ. ನಾಪತ್ತೆಯಾದ 17 ವರ್ಷದ ಹುಡುಗನನ್ನು ಒಂದು ವಾರದಲ್ಲಿ ಭಾರತಕ್ಕೆ ಕಳಿಸಲಾಗುವುದು ಎಂದು ತೇಜ್‌ಪುರ ರಕ್ಷಣಾ ವಿಭಾಗದ ಪಿಆರ್‌ಒ ಲೆಫ್ಟಿನೆಂಟ್ ಕರ್ನಲ್ ಹರ್ಷವರ್ಧನ್ ಪಾಂಡೆ ಹೇಳಿದ್ದಾರೆ.
ಇದಕ್ಕೂ ಮೊದಲು ಭಾರತೀಯ ಸೇನೆ ಅರುಣಾಚಲ ಪ್ರದೇಶದ ಈ ಬಾಲಕನನ್ನು ಪತ್ತೆ ಮಾಡಲು ಮತ್ತು ಹಿಂದಿರುಗಿಸಲು ಚೀನಾದ ಪೀಪಲ್ ಲಿಬರೇಶನ್ ಆರ್ಮಿ (ಪಿಎಲ್‌ಎ)ಯ ಸಹಾಯವನ್ನು ಕೋರಿತ್ತು. ಚೀನಾ ಸೇನೆಯು ಆತನನ್ನು ವಶಪಡಿಸಿಕೊಂಡಿರುವ ಶಂಕೆ ಇತ್ತು ಎಂದು ತೇಜ್‌ಪುರ ರಕ್ಷಣಾ ಸಚಿವಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಹೇಳಿದ್ದರು.