ನವದೆಹಲಿ: ಭಾರತ-ಚೀನಾ ಗಡಿಯ ವಾಸ್ತವ ನಿಯಂತ್ರಣ ರೇಖೆ(ಎಲ್ಎಸಿ)ಯುದ್ದಕ್ಕೂ ಚೀನಿ ವಾಯುಪಡೆ ವಾಸ್ತವ್ಯ ಹೂಡಿದ್ದು, ನಮ್ಮ ಸೈನಿಕರನ್ನೂ ಆ ಪ್ರದೇಶಗಳಲ್ಲಿ ನಿಯೋಜಿಸಲಾಗಿದೆ ಎಂದು ಭಾರತೀಯ ವಾಯುಪಡೆ (ಐಎಎಫ್) ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿ.ಆರ್. ಚೌಧರಿ ತಿಳಿಸಿದ್ದಾರೆ.
ಇಂದು ಭಾರತೀಯ ವಾಯುಸೇನೆಯ 89ನೇ ವಾರ್ಷಿಕೋತ್ಸವದ ಹಿನ್ನೆಲೆ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಚೌಧರಿ, ವಾಸ್ತವ ನಿಯಂತ್ರಣ ರೇಖೆಯಲ್ಲಿನ ಪರಿಸ್ಥಿತಿ ಏನೆಂದರೆ, ಈಗಲೂ ಕೂಡ ಚೀನಾದ ಸೈನಿಕರು ಮೂರು ವಾಯುನೆಲೆಗಳಲ್ಲಿ ಇದ್ದಾರೆ. ಯಾವುದೇ ಸವಾಲು ಎದುರಿಸಲು ನಾವು ಸಿದ್ಧರಾಗಿದ್ದು, ನಮ್ಮ ಸೇನೆ ಸಂಪೂರ್ಣವಾಗಿ ನಿಯೋಜನೆಗೊಂಡಿದೆ ಎಂದು ಮಾಹಿತಿ ನೀಡಿದರು.
ಭಾರತದ ಪೂರ್ವ ಲಡಾಖ್ ಸಮೀಪವಿರುವ ಚೀನಾದ ಕ್ಸಿನ್‌ಜಿಯಾಂಗ್ ಮಿಲಿಟರಿ ಜಿಲ್ಲೆಯ ಎತ್ತರದ ಪ್ರದೇಶದಲ್ಲಿ ಪೀಪಲ್ಸ್ ಲಿಬರೇಶನ್ ಆರ್ಮಿಯು (ಪಿಎಲ್‌ಎ) ನೈಟ್ ಡ್ರಿಲ್ ಸೇರಿದಂತೆ ಸೇನಾ ಸಮರಾಭ್ಯಾಸವನ್ನು ಹೆಚ್ಚಿಸಿದೆ. ರಾತ್ರಿ ವೇಳೆ ಸುಮಾರು 5,000 ಮೀಟರ್ (16,400 ಅಡಿ) ಎತ್ತರದ ಪ್ರದೇಶದಲ್ಲಿ ಲೈವ್-ಫೈರ್ ಮಷಿನ್ ಗನ್ ಡ್ರಿಲ್‌ಗಳನ್ನು ಪಿಎಲ್‌ಎ ಅಭ್ಯಾಸ ಮಾಡುತ್ತಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು.