ಬೀಜಿಂಗ್:ಮುಂದಿನ ವರ್ಷದ ಜಿ-20 ಸಭೆಯನ್ನು ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ನಡೆಸುವ ಭಾರತದ ಪ್ರಸ್ತಾವನೆಗೆ ಚೀನಾ ವಿರೋಧ ವ್ಯಕ್ತಪಡಿಸಿದೆ. ತನ್ನ ಆಪ್ತಮಿತ್ರ ಪಾಕಿಸ್ತಾನದ ಜೊತೆ ದನಿಗೂಡಿಸಿರುವ ಚೀನಾ, ಈ ವಿಷಯದಲ್ಲಿ ರಾಜಕೀಯ ಬೆರೆಸಬಾರದು ಎಂದು ಹೇಳಿದೆ. ಮಾಧ್ಯಮದವರೊಂದಿಗೆ ಮಾತನಾಡಿದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಚೀನಾದ ನಿಲುವನ್ನು ವ್ಯಕ್ತಪಡಿಸಿದ್ದಾರೆ.
ಕಾಶ್ಮೀರ ವಿಷಯದಲ್ಲಿ ಚೀನಾ ನಿಲುವು ಸ್ಥಿರ ಹಾಗೂ ಸ್ಪಷ್ಟವಾಗಿದೆ. ಇದು ಭಾರತ ಹಾಗೂ ಪಾಕಿಸ್ತಾನಗಳ ಮಧ್ಯದ ಪಾರಂಪರಿಕ ವಿಷಯವಾಗಿದೆ. ವಿಶ್ವಸಂಸ್ಥೆಯ ನಿರ್ಣಯಗಳು ಮತ್ತು ದ್ವಿಪಕ್ಷೀಯ ಒಪ್ಪಂದಗಳನ್ವಯ ಈ ವಿವಾದವನ್ನು ಬಗೆಹರಿಸಬೇಕಿದೆ ಎಂದು ಝಾವೋ ತಿಳಿಸಿದರು.
ಎರಡೂ ದೇಶಗಳು ಏಕಪಕ್ಷೀಯ ನಿರ್ಧಾರಗಳಿಂದ ಪರಿಸ್ಥಿತಿ ಹಾಳು ಮಾಡುವುದು ಬೇಡ. ವಿವಾದ ಪರಿಹಾರಕ್ಕಾಗಿ ಮಾತುಕತೆಗಳು ನಡೆಯಲಿ. ಆರ್ಥಿಕ ಅಭಿವೃದ್ಧಿಗಾಗಿ ಎರಡೂ ಪಕ್ಷಗಳು ಗಮನಹರಿಸಲಿ ಮತ್ತು ವಿಷಯವನ್ನು ರಾಜಕೀಯಗೊಳಿಸುವುದನ್ನು ನಿಲ್ಲಿಸಲಿ ಎಂದು ಝಾವೋ ಭಾರತ ಮತ್ತು ಪಾಕಿಸ್ತಾನಗಳನ್ನು ಉದ್ದೇಶಿಸಿ ಹೇಳಿದರು.
ಒಂದು ವೇಳೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಜಿ-20 ಸಭೆ ನಡೆದರೆ ಚೀನಾ ಅದರಲ್ಲಿ ಭಾಗವಹಿಸುತ್ತದೆಯಾ ಎಂಬ ಪ್ರಶ್ನೆಗೆ, ಅದರ ಬಗ್ಗೆ ನಾವು ನಂತರ ಪರಿಶೀಲಿಸುತ್ತೇವೆ ಎಂದರು. ಪಾಕ್ ಆಕ್ರಮಿತ ಕಾಶ್ಮೀರದ ವಿವಾದಿತ ಪ್ರದೇಶದಲ್ಲಿ ಚೀನಾ ಎಕನಾಮಿಕ್ ಕಾರಿಡಾರ್ ನಿರ್ಮಿಸುತ್ತಿದೆ ಎಂಬ ಆರೋಪಗಳ ಬಗ್ಗೆ ಪ್ರಶ್ನಿಸಿದಾಗ, ಈ ಎರಡೂ ವಿಷಯಗಳು ವಿಭಿನ್ನ ರೀತಿಯದ್ದಾಗಿವೆ. ಪಾಕಿಸ್ತಾನದ ಆರ್ಥಿಕತೆ ಉತ್ತಮಗೊಳಿಸಲು ಹಾಗೂ ಅಲ್ಲಿಯ ಜನರ ಜೀವನಮಟ್ಟ ಸುಧಾರಿಸಲು ಚೀನಾ ಹಲವಾರು ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಝಾವೋ ಉತ್ತರಿಸಿದರು.
ಅದರಲ್ಲಿ ಕೆಲವು ಯೋಜನೆಗಳು ಪಾಕಿಸ್ತಾನದ ನಿಯಂತ್ರಣದಲ್ಲಿರುವ ಕಾಶ್ಮೀರ ಭಾಗದಲ್ಲಿವೆ. ಸ್ಥಳೀಯ ಜನರ ಆರ್ಥಿಕತೆ ಅಭಿವೃದ್ಧಿಪಡಿಸಲು ಮತ್ತು ಅವರ ಜೀವನೋಪಾಯವನ್ನು ಸುಧಾರಿಸಲು ಸಹಾಯ ಮಾಡುವ ಉದ್ದೇಶದಿಂದ ಚೀನಾ ಕಂಪನಿಗಳು ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಆದರೆ ಹಾಗಂತ ಕಾಶ್ಮೀರದ ಬಗ್ಗೆ ನಮ್ಮ ನಿಲುವು ಬದಲಾಗಿದೆ ಎಂದು ಅರ್ಥವಲ್ಲಎಂದು ಅವರು ಹೇಳಿದರು.
ಪಾಕಿಸ್ತಾನವು ಕಾಶ್ಮೀರದಲ್ಲಿ ಜಿ20 ರಾಷ್ಟ್ರಗಳ ಸಭೆಯನ್ನು ನಡೆಸುವ ಭಾರತದ ಪ್ರಸ್ತಾವನೆಯನ್ನು ಜೂನ್ 25 ರಂದು ತಿರಸ್ಕರಿಸಿದೆ.
ಇದನ್ನು ಓದಿ:ಚೀನಾದ ಬಳಿಕ ಭಾರತದಲ್ಲೇ ನಗರವಾಸಿಗಳು ಹೆಚ್ಚು: ವಿಶ್ವಸಂಸ್ಥೆ ವರದಿ