ನವದೆಹಲಿ:ಚೀನಾ ತನ್ನ ಆಕ್ರಮಣಕಾರಿ ವಿದೇಶಾಂಗ ನೀತಿಯನ್ನು ಮುಂದುವರೆಸುತ್ತಿದೆ. ಟಿಬೆಟ್ ಸ್ವಾಯುತ್ತ ಪ್ರದೇಶದಲ್ಲಿರುವ ಭೂತಾನ್ಗೆ ಸಮೀಪದಲ್ಲಿರುವ ಚುಂಬಿ ಕಣಿವೆಯಲ್ಲಿ ತನ್ನ ಬಲ ವೃದ್ಧಿಸಿಕೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ.
ಈಶಾನ್ಯ ಭಾರತದ ರಾಜ್ಯಗಳಲ್ಲಿ ಪರಸ್ಪರ ಸಂಪರ್ಕ ಕಲ್ಪಿಸುವ ಸಿಲಿಗುರಿ ಕಾರಿಡಾರ್‌ಗೆ ಸಮೀಪದಲ್ಲಿ ಈ ಚುಂಬಿ ಕಣಿವೆ ಇದೆ. ಇದು ಭಾರತದ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಕೆಲವು ದಿನಗಳ ಹಿಂದಷ್ಟೇ ಭಾರತೀಯ ಸೇನೆಯ ಪೂರ್ವ ವಲಯದ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಮನೋಜ್ ಪಾಂಡೆ ಸಿಲಿಗುರಿ ಸೂಕ್ಷ್ಮ ಪ್ರದೇಶವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದರು.
ಚೀನಾದ ಮಿಲಿಟರಿ ಮತ್ತು ಭದ್ರತಾ ಬೆಳವಣಿಗೆಗಳ ಕುರಿತು ಅಮೆರಿಕಾ ಸಂಸತ್ತು 2021ರ ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿದ್ದು, ಭಾರತ ಮತ್ತು ಚೀನಾದ ಗಡಿಯಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆಗಳು ನಡೆಯುತ್ತಿವೆ. ಅದರ ಹೊರತಾಗಿಯೂ ಎಲ್ಎಸಿಯಲ್ಲಿ ಚೀನಾ ಕೆಲವು ಪ್ರದೇಶಗಳನ್ನು ತನ್ನದೆಂದು ಹೇಳಿಕೊಳ್ಳಲು ಪ್ರಯತ್ನಿಸುತ್ತಿದೆ ಹಾಗೂ ಯುದ್ಧತಂತ್ರ ರೀತಿಯ ಕ್ರಮಗಳನ್ನು ಕೈಗೊಂಡಿದೆ ವರದಿಯಲ್ಲಿ ಉಲ್ಲೇಖಿಸಿದೆ.
ಸಿಲಿಗುರಿ ಕಾರಿಡಾರ್‌ಗೆ ಸಮೀಪದಲ್ಲಿರುವ ಈ ಚುಂಬಿ ಕಣಿವೆಯಲ್ಲಿ ಚೀನಾ ರಸ್ತೆಗಳನ್ನು ನಿರ್ಮಾಣ ಮಾಡುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ನಡೆಯಿಂದ ಭಾರತ ನಿರ್ಮಾಣ ಮಾಡುತ್ತಿರುವ ಸಿಲಿಗುರಿ ಕಾರಿಡಾರ್ ಮೇಲೆ ಅಧಿಕ ಒತ್ತಡ ಉಂಟಾಗಲಿದೆ ಎಂದು ಇಬ್ಬರು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.