ನವದೆಹಲಿ: ಚೀನಾ ಮತ್ತೊಮ್ಮೆ ಗಡಿ ವಿಚಾರದಲ್ಲಿ ತಗಾದೆ ತೆಗೆಯಲು ಮುಂದಾಗಿದೆ ಎಂಬ ಅನುಮಾನಗಳಿಗೆ ಪುಷ್ಠಿ ನೀಡುವ ಬೆಳವಣಿಗೆಗಳು ನಡೆಯುತ್ತಿವೆ. ಮೊದಲಿಗೆ ಗಡಿ ಭಾಗಗಳಲ್ಲಿ ಬಿಡಾರಗಳನ್ನು ಸ್ಥಾಪಿಸಿ, ಅವುಗಳಲ್ಲಿ ಸೈನಿಕರನ್ನು ಶೇಖರಣೆ ಮಾಡುತ್ತಿದ್ದು, ಈಗ ಸೈನಿಕರು ಇರುವ ಸಲುವಾಗಿ ಶಾಶ್ವತವಾಗಿ ಕಟ್ಟಡಗಳನ್ನು ಕಟ್ಟುತ್ತಿದೆ. ಇದರ ಜೊತೆಗೆ ಗಡಿ ಭಾಗಗಳಲ್ಲಿ ಚೀನಾ ಸೇನೆ ರಸ್ತೆಗಳನ್ನು ನಿರ್ಮಿಸುತ್ತಿದೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಒಂದು ಕಡೆಯಿಂದ ಮತ್ತೊಂದು ಕಡೆಗೆ ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ ಕಡಿಮೆ ಅವಧಿಯಲ್ಲಿ ತೆರಳಲು ಸಾಧ್ಯವಾಗುವಂತೆ ಕಾಂಕ್ರಿಟ್ ರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಭಾರತೀಯ ಏಜೆನ್ಸಿಗಳು ಹೊಸದಾಗಿ ನಿರ್ಮಿಸಲಾಗುತ್ತಿರುವ ಕಟ್ಟಡಗಳನ್ನು ಗಮನಿಸಿದ್ದು, ಉತ್ತರ ಸಿಕ್ಕಿಂನ ನಾಕು ಲಾ ಪ್ರದೇಶದಿಂದ ಕೆಲವೇ ಕೆಲವು ಕಿಲೋಮೀಟರ್ಗಳಷ್ಟು ದೂರದಲ್ಲಿ ಚೀನಾದ ಮಿಲಿಟರಿ ಕ್ಯಾಂಪ್ಗಳಿರುವುದು ತಿಳಿದುಬಂದಿದೆ.