ಶ್ರೀನಗರ( ಜಮ್ಮು ಮತ್ತು ಕಾಶ್ಮೀರ ):ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಪ್ರದೇಶವನ್ನು ತನ್ನ ಹೊಸ ನಕ್ಷೆಯಲ್ಲಿ ಸೇರಿಸಿಕೊಂಡಿರುವ ಚೀನಾದ ಕ್ರಮವನ್ನು ಖಂಡಿಸಿರುವ ಟಿಬೆಟಿಯನ್ ಸಂಸತ್ತಿನ ಸದಸ್ಯ ದಾವಾ ತ್ಸೆರಿಂಗ್, ಚೀನಾವನ್ನು ಎಂದಿಗೂ ನಂಬಲು ಸಾಧ್ಯವಿಲ್ಲ ಎಂದಿದ್ದಾರೆ. ಜೊತೆಗೆ, ದೇಶಭ್ರಷ್ಟರಾಗಿರುವ 11 ಟಿಬೆಟಿಯನ್ ಸಂಸದರ ನಿಯೋಗವು ಭಾರತ ಪ್ರವಾಸದಲ್ಲಿದ್ದು, ಟಿಬೆಟ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಅರಿವು ಮೂಡಿಸಲು ವಿವಿಧ ರಾಜ್ಯಗಳ ನಾಯಕರು ಮತ್ತು ಬುದ್ಧಿಜೀವಿಗಳನ್ನು ಭೇಟಿ ಮಾಡುತ್ತಿದೆ. ಚೀನಾದ ನೆರೆಯ ವಿಸ್ತರಣಾ ಕಾರ್ಯಸೂಚಿಯ ಬಗ್ಗೆ ಎಚ್ಚರದಿಂದಿರಬೇಕು ಎಂದು ಭಾರತೀಯ ಅಧಿಕಾರಿಗಳಿಗೆ ಅವರು ಎಚ್ಚರಿಕೆ ನೀಡಿದ್ದಾರೆ.
ಅರುಣಾಚಲ ಪ್ರದೇಶದ ಮೇಲೆ ಚೀನಾ ಹಕ್ಕು ಸಾಧಿಸಿದ ಕೆಲವೇ ದಿನಗಳ ಬಳಿಕ ಟಿಬೆಟಿಯನ್ ಜನರನ್ನು ವಶಪಡಿಸಿಕೊಳ್ಳುತ್ತಿರುವ ಚೀನಾದ ಆಡಳಿತದ ಬಗ್ಗೆ ದಾವಾ ತ್ಸೆರಿಂಗ್ ಧ್ವನಿಯೆತ್ತಿದ್ದಾರೆ. "ಟಿಬೆಟ್‌ನಲ್ಲಿನ ಪರಿಸ್ಥಿತಿಯ ಬಗ್ಗೆ ಅರಿವು ಮೂಡಿಸಲು ನಮ್ಮ ನಾಯಕರು ಭಾರತದ ವಿವಿಧ ರಾಜ್ಯಗಳ ಬುದ್ಧಿಜೀವಿಗಳನ್ನು ಭೇಟಿ ಮಾಡುತ್ತಿದ್ದಾರೆ. ಜಮ್ಮುವಿನಲ್ಲಿ ಲೆಫ್ಟಿನೆಂಟ್ ಜನರಲ್ ರಾಕೇಶ್ ಶರ್ಮಾ ಅವರನ್ನು ಭೇಟಿ ಚರ್ಚೆ ನಡೆಸಲಾಗಿದೆ. ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಅನ್ನು ಚೀನಾ ದೇಶವು ತನ್ನ ಹೊಸ ನಕ್ಷೆಯಲ್ಲಿ ಸೇರಿಸಿಕೊಂಡಿದೆ. ಚೀನಾದ ಈ ಕ್ರಮ ಖಂಡಿನೀಯ, "ಚೀನಾವನ್ನು ಎಂದಿಗೂ ನಂಬಲು ಸಾಧ್ಯವಿಲ್ಲ" ಎಂದಿದ್ದಾರೆ.
ಚೀನಾ ದೇಶವು ಸೋಮವಾರ ತನ್ನ 'ಸ್ಟ್ಯಾಂಡರ್ಡ್ ಮ್ಯಾಪ್'ನ 2023 ಆವೃತ್ತಿಯನ್ನು ಬಿಡುಗಡೆ ಮಾಡಿದೆ, ಇದರಲ್ಲಿ ಅರುಣಾಚಲ ಪ್ರದೇಶ ಮತ್ತು ಅಕ್ಸಾಯ್ ಚಿನ್ ಪ್ರದೇಶವನ್ನು ತನ್ನ ಪ್ರದೇಶದ ಭಾಗವಾಗಿ ಎಂದು ತೋರಿಸಿಕೊಂಡಿದೆ, ಯಾವಾಗಲೂ ನಿಮ್ಮೊಂದಿಗೆ ಸ್ನೇಹವನ್ನು ಬಯಸುತ್ತೇವೆ ಎಂದು ಹೇಳುವ ಚೀನಾದ ಸಿಹಿ ಮಾತಿನ ಹಿಂದೆ ದುರುದ್ದೇಶ ಅಡಗಿದೆ. ಚೀನಾ ಮತ್ತು ಅದರ ನಾಯಕರನ್ನು ಎಂದಿಗೂ ನಂಬಬೇಡಿ. ಏಕೆಂದರೆ, ಅವರು ಎಂದಿಗೂ ಯಾರ ಸ್ನೇಹಿತರಾಗಲು ಸಾಧ್ಯವಿಲ್ಲ. ಕ್ಸಿ ಜಿನ್‌ಪಿಂಗ್ ಅವರನ್ನು ಎಂದಿಗೂ ನಂಬಬಾರದು, ಚೀನಾದ ವಿಸ್ತರಣಾ ನೀತಿಯ ವಿರುದ್ಧ ದಕ್ಷಿಣ ಏಷ್ಯಾದ ಎಲ್ಲಾ ದೇಶಗಳು ಒಂದಾಗಬೇಕು ಎಂದು ತ್ಸೆರಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.