ಕರ್ನಾಟಕ

karnataka

ETV Bharat / bharat

ಭಾರತದಲ್ಲಿ 2021ರ ಬ್ರಿಕ್ಸ್​ ಶೃಂಗಸಭೆಗೆ ಚೀನಾ ಮುಕ್ತ ಬೆಂಬಲ: ಕ್ಸಿ ಜಿನ್​ಪಿಂಗ್ ಬರುವರೇ? - ಚೀನಾ ಭಾರತ ಬ್ರಿಕ್ಸ್

ಭಾರತದಲ್ಲಿ ನಡೆಯಲ್ಲಿರುವ 2021ರ ಬ್ರಿಕ್ಸ್​ ರಾಷ್ಟ್ರಗಳ ಶೃಂಗಸಭೆಗೆ ಚೀನಾ ಮುಕ್ತವಾಗಿ ಬೆಂಬಲ ನೀಡಲಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಹೇಳಿದ್ದಾರೆ. ಆದರೆ, ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾಗವಹಿಸಲಿದ್ದಾರೆಯೇ ಎಂಬುದರ ಬಗ್ಗೆ ವಾಂಗ್ ಸ್ಪಷ್ಟಪಡಿಸಿಲ್ಲ.

BRICS
BRICS

By

Published : Feb 22, 2021, 5:42 PM IST

ಬೀಜಿಂಗ್:ಈ ವರ್ಷದ ಬ್ರಿಕ್ಸ್ ಶೃಂಗಸಭೆ ಆಯೋಜಿಸಲು ಚೀನಾ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಉದಯೋನ್ಮುಖ ಆರ್ಥಿಕತೆಗಳ ಐದು ಸದಸ್ಯರ ಗುಂಪಿನಲ್ಲಿ ಸಹಕಾರ ಬಲಪಡಿಸಲು ದೆಹಲಿಯೊಂದಿಗೆ ಕೆಲಸ ಮಾಡುವುದಾಗಿ ಹೇಳಿದೆ.

ಭಾರತವು 2021ರ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ಅಧ್ಯಕ್ಷತೆ ವಹಿಸಿಕೊಂಡಿದ್ದು, ಈ ವರ್ಷದ ಕೊನೆಯಲ್ಲಿ ಶೃಂಗಸಭೆ ನಡೆಸಲು ಸಜ್ಜಾಗಿದೆ. ಫೆಬ್ರವರಿ 19ರಂದು ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಭಾರತದ ಬ್ರಿಕ್ಸ್ 2021 ವೆಬ್‌ಸೈಟ್ ಅನ್ನು ದೆಹಲಿಯ ಸುಷ್ಮಾ ಸ್ವರಾಜ್ ಭವನದಲ್ಲಿ ಪ್ರಾರಂಭಿಸಿದರು.

ಈ ವರ್ಷ ಭಾರತ ಬ್ರಿಕ್ಸ್ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಬಗ್ಗೆ ಕೇಳಿದಾಗ, ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್ಬಿನ್ ಅವರು ಮಾಧ್ಯಮಗೋಷ್ಠಿಯಲ್ಲಿ ಮಾತನಾಡುತ್ತಾ, ಶೃಂಗಸಭೆ ಆಯೋಜಿಸುವಲ್ಲಿ ಬೀಜಿಂಗ್ ದೆಹಲಿಯನ್ನು ಬೆಂಬಲಿಸುತ್ತದೆ ಎಂದರು.

ಬ್ರಿಕ್ಸ್ ಉದಯೋನ್ಮುಖ ಆರ್ಥಿಕತೆಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳನ್ನು ಒಳಗೊಂಡಿರುವ ಜಾಗತಿಕ ಪ್ರಭಾವವನ್ನು ಹೊಂದಿರುವ ಸಹಕಾರ ಕಾರ್ಯವಿಧಾನವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅದು ಹೆಚ್ಚಿನ ಒಗ್ಗಟ್ಟು ಮತ್ತು ಸದೃಢವಾದ ಪ್ರಾಯೋಗಿಕ ಸಹಕಾರ ಮತ್ತು ಹೆಚ್ಚಿನ ಪ್ರಭಾವ ಕಂಡಿದೆ ಎಂದು ವಾಂಗ್ ಹೇಳಿದರು.

ಬ್ರಿಕ್ಸ್ ಈಗ ಅಂತಾರಾಷ್ಟ್ರೀಯ ವ್ಯವಹಾರಗಳಲ್ಲಿ ಸಕಾರಾತ್ಮಕ, ಸ್ಥಿರ ಮತ್ತು ರಚನಾತ್ಮಕ ಶಕ್ತಿಯಾಗಿದೆ. ಈ ಕಾರ್ಯವಿಧಾನಕ್ಕೆ ಚೀನಾ ಪ್ರಾಮುಖ್ಯತೆ ನೀಡುತ್ತದೆ. ಒಗ್ಗಟ್ಟನ್ನು ಮತ್ತು ಸಹಕಾರವನ್ನು ಕ್ರೋಢೀಕರಿಸಲು ಅದರೊಳಗೆ ಕಾರ್ಯತಂತ್ರದ ಸಹಭಾಗಿತ್ವ ಗಾಢವಾಗಿಸಲು ನಾವು ಬದ್ಧರಾಗಿದ್ದೇವೆ ಎಂದು ವಾಂಗ್ ಆಶ್ವಾಸನೆ ನೀಡಿದ್ದಾರೆ.

ಇದನ್ನೂ ಓದಿ: ದಶಕಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್​ ಅಭಿವೃದ್ಧಿಯನ್ನು ನಿರ್ಲಕ್ಷಿಸಿದೆ: ಕೈ ವಿರುದ್ಧ ಮೋದಿ ವಾಗ್ದಾಳಿ

ಈ ವರ್ಷದ ಸಭೆಯನ್ನು ಆಯೋಜಿಸಲು ನಾವು ಭಾರತವನ್ನು ಬೆಂಬಲಿಸುತ್ತೇವೆ. ಸಂವಹನ ಸಂವಾದವನ್ನು ಬಲಪಡಿಸಲು, ಬ್ರಿಕ್ಸ್ ಜೊತೆಗೆ ಸಹಕಾರ ವಿಸ್ತರಿಸಲು ಮತ್ತು ಬ್ರಿಕ್ಸ್ ಅಡಿ ಹೆಚ್ಚಿನ ಪ್ರಗತಿಗಾಗಿ ಕೆಲಸ ಮಾಡಲು, ಕೋವಿಡ್​-19 ಸೋಲಿಸಲು ಜಗತ್ತಿಗೆ ಸಹಾಯ ಮಾಡಲು, ಆರ್ಥಿಕ ಬೆಳವಣಿಗೆ ಪುನರಾರಂಭಿಸಲು ಮತ್ತು ಜಾಗತಿಕ ಆಡಳಿತವನ್ನು ಸುಧಾರಿಸಲು ನಾವು ಇತರ ಸದಸ್ಯರೊಂದಿಗೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.

ಆದರೆ, ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಭಾಗವಹಿಸಲಿದ್ದಾರೆಯೇ ಎಂದು ವಾಂಗ್ ಸ್ಪಷ್ಟಪಡಿಸಿಲ್ಲ. ಕಳೆದ ವರ್ಷ ರಷ್ಯಾ ಆಯೋಜಿಸಿದ್ದ ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಐದು ಸದಸ್ಯರ ಬಣದ ಎಲ್ಲಾ ವಾರ್ಷಿಕ ಶೃಂಗಸಭೆಗಳಲ್ಲಿ ಕ್ಸಿ ಭಾಗವಹಿಸಿದ್ದರು.

ABOUT THE AUTHOR

...view details