ನವದೆಹಲಿ:ಭಾರತದಾದ್ಯಂತ ಹೊಸ ಕೋವಿಡ್ ರೂಪಾಂತರಿ ಒಮಿಕ್ರಾನ್ ಆತಂಕದ ನಡುವೆ, ಮಕ್ಕಳು ಹೊಸ ರೀತಿಯ ಒತ್ತಡಕ್ಕೆ ಗುರಿಯಾಗುತ್ತಾರೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದು, ಈ ಮೊದಲಿನ ಕೋವಿಡ್ ಮಾರ್ಗಸೂಚಿಗಳನ್ನೇ ಪಾಲಿಸುವಂತೆ ಸಲಹೆ ನೀಡಿದ್ದಾರೆ.
1. ಆಫ್ರಿಕಾದಲ್ಲಿ ಮಕ್ಕಳನ್ನು ಕಾಡುತ್ತಿದೆ ಒಮಿಕ್ರಾನ್
ಆಫ್ರಿಕಾದ ಬಹುತೇಕ ದೇಶಗಳಲ್ಲಿ ಒಮಿಕ್ರಾನ್ ಸೋಂಕು ಮಕ್ಕಳಲ್ಲಿ ಹೆಚ್ಚು ಕಂಡುಬಂದಿದ್ದು, ತೀವ್ರ ನಿಗಾ ಘಟಕಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಕೆಲವು ವರದಿಗಳನ್ನು ಆಧರಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ತಿಳಿಸಿದೆ.
2. 'ಶಾಲಾ ಮಕ್ಕಳಿಗೆ ಆದಷ್ಟು ಬೇಗ ಲಸಿಕೆ ಹಾಕಿ'
ಮಕ್ಕಳಲ್ಲಿ ಸೋಂಕು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ನಾವು ಎಲ್ಲಾ ಶಾಲಾ-ಕಾಲೇಜುಗಳಲ್ಲಿ ಕೋವಿಡ್ ಪ್ರೋಟೋಕಾಲ್ ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಮಕ್ಕಳಿಗೆ ಆದಷ್ಟು ಬೇಗ ಲಸಿಕೆ ಹಾಕುವಂತೆ ಮನವಿ ಮಾಡುತ್ತೇವೆ ಎಂದು ಐಎಂಎ ಅಧ್ಯಕ್ಷ ಡಾ.ಜೆ.ಎ.ಜಯಲಾಲ್ ಹೇಳಿದರು. 12ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುವುದನ್ನು ಸರ್ಕಾರವು ಶೀಘ್ರವಾಗಿ ಪ್ರಾರಂಭಿಸಬೇಕು ಎಂದು ಐಎಂಎ ಒತ್ತಾಯಿಸುತ್ತದೆ ಎಂದು ಅವರು ಹೇಳಿದ್ದಾರೆ.
3. 'ಒಮಿಕ್ರಾನ್ ಮರುಕಳಿಸುವ ಸಾಧ್ಯತೆ ಇದೆ'
ದ.ಆಫ್ರಿಕಾದ ಆರೋಗ್ಯ ಸಂಸ್ಥೆಗಳು ಸಂಗ್ರಹಿಸಿದ ಮಾಹಿತಿ ಪ್ರಕಾರ, ಒಮಿಕ್ರಾನ್ ರೂಪಾಂತರಿಯು 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಆದರೆ ನಮಗೆ ಬೇಕಾಗಿರುವುದು ಸರಿಯಾದ ಮುನ್ನೆಚ್ಚರಿಕೆ ಕ್ರಮಗಳು ಮತ್ತು ಲಸಿಕೆ. ಒಮಿಕ್ರಾನ್ ಒಂದು ಬಾರಿ ಬಂದಮೇಲೆ ಮತ್ತೆ ಬರುವ ಸಾಧ್ಯತೆಯೂ ಇದೆ ಎಂದು ಐಎಂಎ ಪ್ರಧಾನ ಕಾರ್ಯದರ್ಶಿ ಡಾ.ಜಯೇಶ್ ಎಂ. ಲೆಲೆ ಹೇಳುತ್ತಾರೆ.
4. ಲಸಿಕೆ ಹಾಕಿಸಿಕೊಳ್ಳದಿದ್ದರೆ ಹೆಚ್ಚು ಅಪಾಯ
ವಿಶ್ವ ಆರೋಗ್ಯ ಸಂಘಟನೆಯೂ ಕೂಡಾ ಮಕ್ಕಳಿಗೆ ಮತ್ತು ಲಸಿಕೆ ಹಾಕಿಸಿಕೊಳ್ಳದವರಿಗೆ ಹೆಚ್ಚಿನ ಅಪಾಯವಿದೆ ಎಂದು ಅಭಿಪ್ರಾಯಪಟ್ಟಿದೆ. ಕಳೆದೆರಡು ವರ್ಷಗಳಿಂದ ಇದ್ದ ಕೋವಿಡ್ ಮಕ್ಕಳ ಮೇಲೆ ಅಷ್ಟೇನೂ ಪರಿಣಾಮ ಬೀರಿಲ್ಲ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ. ರೋಗ ನಿರೋಧಕ ಶಕ್ತಿಯಿಂದಾಗಿ ಮಕ್ಕಳ ಮೇಲೆ ಕೋವಿಡ್ ಅಷ್ಟೇನೂ ಪರಿಣಾಮ ಬೀರಲಿಲ್ಲ. ಈಗ ಅಪಾಯದ ಪ್ರಮಾಣ ಹೆಚ್ಚಿದೆ ಎಂದು ಖ್ಯಾತ ಶಿಶು ವೈದ್ಯ ಮತ್ತು ಆರೋಗ್ಯ ತಜ್ಞ ವಿನಯ್ ಅಗರ್ವಾಲ್ ಎಚ್ಚರಿಸಿದ್ದಾರೆ.
ಸರ್ಕಾರದ ಅಂಕಿಅಂಶಗಳ ಪ್ರಕಾರ, ಭಾರತ್ ಬಯೋಟೆಕ್‌ನ ಕೋವ್ಯಾಕ್ಸಿನ್, ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವೊವಾಕ್ಸ್, ಬಯೋಲಾಜಿಕಲ್ ಇ ಲಿಮಿಟೆಡ್, ಜಾನ್ಸನ್ ಆ್ಯಂಡ್ ಜಾನ್ಸನ್ ಮಕ್ಕಳಿಗೆ ಕೋವಿಡ್ ಲಸಿಕೆಗಳ ಸಂಶೋಧನೆ ಮಾಡುತ್ತಿವೆ.
ಇದನ್ನೂ ಓದಿ:ಕೇರಳದಲ್ಲಿ ಮತ್ತೆ ಹಕ್ಕಿಜ್ವರ ಪತ್ತೆ.. ಕೋಳಿ, ಪಕ್ಷಿಗಳ ಹರಣಕ್ಕೆ ಆದೇಶ