ಎರ್ನಾಕುಲಂ (ಕೇರಳ) : ಅವಿವಾಹಿತ ತಾಯಂದಿರಿಗೆ ಮತ್ತು ಅತ್ಯಾಚಾರ ಸಂತ್ರಸ್ತರಿಗೆ ಆದ ಮಕ್ಕಳು ತಮ್ಮ ಜನ್ಮ ಪ್ರಮಾಣಪತ್ರದಲ್ಲಿ ತಾಯಿಯ ಹೆಸರನ್ನು ಮಾತ್ರ ಸೇರಿಸಿದರೆ ಸಾಕು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಜನನ ಪ್ರಮಾಣಪತ್ರದಿಂದ ತಂದೆಯ ಹೆಸರನ್ನು ತೆಗೆದುಹಾಕುವಂತೆ ಒತ್ತಾಯಿಸಿ ಅವಿವಾಹಿತ ಮಹಿಳೆ ಮತ್ತು ಆಕೆಯ ಮಗ ಸಲ್ಲಿಸಿದ್ದ ಅರ್ಜಿಯನ್ನು ಪರಿಗಣಿಸಿದ ಹೈಕೋರ್ಟ್ ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಈ ಮಹತ್ವದ ಆದೇಶ ನೀಡಿದ್ದಾರೆ.
ಈ ಮಕ್ಕಳಿಗೆ ಸ್ವಾತಂತ್ರ್ಯ, ಖಾಸಗಿತನ ಮತ್ತು ಘನತೆಯ ಹಕ್ಕನ್ನು ನಿರಾಕರಿಸಲಾಗುವುದಿಲ್ಲ ಎಂದು ಹೇಳಿದ್ದಾರೆ. ಅವಿವಾಹಿತ ತಾಯಂದಿರು ಮತ್ತು ಅತ್ಯಾಚಾರ ಸಂತ್ರಸ್ತರ ಮಕ್ಕಳ ಜನನ ಪ್ರಮಾಣಪತ್ರದಲ್ಲಿ ತಾಯಿಯ ಹೆಸರನ್ನು ಮಾತ್ರ ಸೇರಿಸಲು ಅವರು ಆದೇಶ ನೀಡಿದ್ದಾರೆ.
ಅವಿವಾಹಿತ ತಾಯಂದಿರ ಮಕ್ಕಳೂ ಈ ದೇಶದ ಪ್ರಜೆಗಳು. ಸಂವಿಧಾನ ನೀಡಿರುವ ಹಕ್ಕುಗಳನ್ನು ಯಾರೂ ನಿರಾಕರಿಸುವಂತಿಲ್ಲ. ಅವರ ವೈಯಕ್ತಿಕ ಜೀವನದಲ್ಲಿ ಹಸ್ತಕ್ಷೇಪ ಮಾಡುವ ಹಕ್ಕು ಯಾರಿಗೂ ಇಲ್ಲ ಮತ್ತು ಯಾರಾದರೂ ಹಾಗೆ ಮಾಡಲು ಪ್ರಯತ್ನಿಸಿದರೆ ಅವರ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ನ್ಯಾಯಾಲಯಗಳು ಮಧ್ಯಪ್ರವೇಶಿಸುತ್ತವೆ ಎಂದು ಹೈಕೋರ್ಟ್ ಎಚ್ಚರಿಸಿದೆ.
ಮೇಲ್ಮನವಿದಾರರಿಗೆ ತಾಯಿಯನ್ನು ಮಾತ್ರ ಪೋಷಕರು ಎಂದು ನಮೂದಿಸುವ ಜನ್ಮ ಪ್ರಮಾಣಪತ್ರವನ್ನು ನೀಡುವಂತೆ ಜನನ ಮತ್ತು ಮರಣ ರಿಜಿಸ್ಟ್ರಾರ್‌ಗೆ ನ್ಯಾಯಾಲಯ ಈ ವೇಳೆ ಸೂಚಿಸಿದೆ.
ಅವಿವಾಹಿತ ತಾಯಂದಿರು ಮತ್ತು ಅತ್ಯಾಚಾರ ಸಂತ್ರಸ್ತರ ಮಕ್ಕಳನ್ನು ಕಡೆಗಣಿಸದಿರುವ ಅಗತ್ಯವನ್ನು ನ್ಯಾಯಾಲಯವು ಗಮನಿಸಿದೆ. ಮಹಾಭಾರತದ ಕರ್ಣನ ಅವಸ್ಥೆಯನ್ನು ನೆನಪಿಸಿಕೊಂಡ ನ್ಯಾಯಾಲಯ, ಆಧುನಿಕ ಜಗತ್ತಿನಲ್ಲಿ ಕರ್ಣನ ಭವಿಷ್ಯ ಯಾರಿಗೂ ಬೇಡ ಎಂದು ಹೇಳಿದೆ.
ಇದನ್ನೂ ಓದಿ:ಅಕ್ರಮ ಮದ್ಯ ಸೇವಿಸಿ 8 ಮಂದಿ ಸಾವಿಗೀಡಾಗಿರುವ ಶಂಕೆ