ಚೆನ್ನೈ: “ಈ ಮಗು ತುಂಬಾ ಮುದ್ದಾಗಿದೆ. ಎರಡು ವರ್ಷದ ಈ ಮಗು ತಂದೆ-ತಾಯಿಗಳನ್ನು ಕಳೆದುಕೊಂಡು ತಬ್ಬಲಿಯಾಗಿದೆ. ಈ ಮಗುವನ್ನು ಯಾರಾದರೂ ದತ್ತು ಪಡೆಯಲು ಇಚ್ಛಿಸುವಿರಾದರೆ ಈ ನಂಬರ್ಗೆ ಕಾಲ್ ಮಾಡಿ.” ಎಂಬ ಒಕ್ಕಣೆಯ ಸಂದೇಶಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ನೋಡುತ್ತಿದ್ದೇವೆ.
ಮಕ್ಕಳ ದತ್ತು ನೀಡುವುದಾಗಿ ಬಂದ ಸಂದೇಶ ಆದರೆ ಇಂಥದೊಂದು ಸಂದರ್ಭಕ್ಕಾಗಿಯೇ ಕಾಯುತ್ತಿರುವ ಕೆಲ ವಂಚಕ ಎನ್ಜಿಓಗಳು ಹಾಗೂ ಮಕ್ಕಳ ಆಶ್ರಯ ತಾಣಗಳು ಈ ಮಕ್ಕಳನ್ನು ಪಡೆದು ದುರುಪಯೋಗಪಡಿಸಿಕೊಳ್ಳುವ ಆತಂಕ ಉಂಟಾಗಿದೆ.
ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ದತ್ತು ನೀಡುವ ಸಂದೇಶ ಹಾಕುವುದು ಕಾನೂನು ಬಾಹಿರ ಹಾಗೂ ಇಂಥ ಕೃತ್ಯಗಳ ಬಗ್ಗೆ ಸಂಬಂಧಿಸಿದ ಸರ್ಕಾರದ ಪ್ರಾಧಿಕಾರಗಳು ಕಣ್ಣಿಟ್ಟಿದ್ದು, ಮಕ್ಕಳ ರಕ್ಷಣೆಗೆ ಮುಂದಾಗಿವೆ ಎನ್ನುತ್ತಾರೆ ಮಕ್ಕಳ ಹಕ್ಕುಗಳ ರಕ್ಷಣಾ ಕಾರ್ಯಕರ್ತರು.
ಮಕ್ಕಳನ್ನು ದತ್ತು ನೀಡುವುದಾಗಿ ಸಂದೇಶ ಹಾಕುವುದು ಕಾನೂನು ಬಾಹಿರ ಎಂಬುದು ತಿಳಿಯದೆ ಹಾಗೂ ಇದರಿಂದ ತಾವು ಕಠಿಣ ಜೈಲು ಶಿಕ್ಷೆಗೆ ಗುರಿಯಾಗಬಹುದು ಎಂಬುದರ ಅರಿವಿಲ್ಲದೆ ಮಕ್ಕಳ ಸಂಬಂಧಿಕರು ಇಂಥ ಸಂದೇಶಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಹಾಕುತ್ತಿರಬಹುದು ಎನ್ನಲಾಗ್ತಿದೆ. ಏನೇ ಆದರೂ ಅನಾಥ ಮಕ್ಕಳ ರಕ್ಷಣೆಯ ಪ್ರಶ್ನೆ ಬಂದಾಗ ಮಕ್ಕಳ ಸಹಾಯವಾಣಿ 1098ಕ್ಕೆ ಕರೆ ಮಾಡುವುದು ಕಡ್ಡಾಯವಾಗಿದೆ.
ಕೋವಿಡ್ನಿಂದ ಸಂಭವಿಸುತ್ತಿರುವ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿರುವ ಮಧ್ಯೆ, ಮಕ್ಕಳ ಸಂಬಂಧಿಕರು ಅರಿಯದೆ ಇಂಥ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಆದರೆ ಇದರಿಂದ ಮುಗ್ಧ ಮಕ್ಕಳು ದುಷ್ಟರ ಕೂಟದ ಪಾಲಾಗಬಹುದು.
ತಮಿಳುನಾಡಿನ ಬಗ್ಗೆ ನೋಡುವುದಾದರೆ, ರಾಜ್ಯದಲ್ಲಿ 14 ದತ್ತು ಕೇಂದ್ರಗಳು ಮತ್ತು 400 ಮಕ್ಕಳ ಆಶ್ರಯ ಮನೆಗಳಿವೆ. ಸದ್ಯದ ಪರಿಸ್ಥಿತಿಯಲ್ಲಿ ಅನಾಥ ಮಕ್ಕಳ ಕುರಿತಾಗಿ ಮಕ್ಕಳ ಸಹಾಯವಾಣಿಗೆ ಯಾವುದೇ ಕರೆಗಳು ಬಂದಿಲ್ಲ. ಆದರೆ ಮಕ್ಕಳಿಗೆ ಆಹಾರ ಬೇಕು, ಸೌಕರ್ಯಗಳು ಬೇಕೆಂಬ ಬೇಡಿಕೆಯ ಕರೆಗಳು ಬಂದಿದ್ದು, ಅವನ್ನು ಆಯಾ ಜಿಲ್ಲೆಗಳ ಮಕ್ಕಳ ರಕ್ಷಣಾ ಘಟಕಗಳು ಪೂರೈಸಿವೆ ಎಂದು ಹೇಳಲಾಗ್ತಿದೆ.
ಆದರೂ ಸಂದೇಶಗಳಲ್ಲಿ ಕಾಣಿಸಿಕೊಂಡ ಮಕ್ಕಳು ಈಗಾಗಲೇ ಯಾವುದೋ ವಂಚಕರ ಗುಂಪಿನ ಪಾಲಾಗಿರಬಹುದು ಎಂದು ಕೆಲ ಮಕ್ಕಳ ಹಕ್ಕುಗಳ ಕಾರ್ಯಕರ್ತರು ಆತಂಕ ವ್ಯಕ್ತಪಡಿಸಿದ್ದಾರೆ.
ತಬ್ಬಲಿಯಾದ ಮಕ್ಕಳ ಕುರಿತಾದ ಸಂದೇಶಗಳ ಬಗ್ಗೆ ಮಾತನಾಡಿದ ತಮಿಳು ನಾಡು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಮಾಜಿ ಸದಸ್ಯ ಪಿ. ಮೋಹನ್, ತಬ್ಬಲಿ ಮಕ್ಕಳನ್ನು ದತ್ತು ಪಡೆಯಲು ಇಚ್ಛಿಸುವ ಒಳ್ಳೆಯ ಮನಸ್ಸಿನ ಜನ ಖಂಡಿತವಾಗಿಯೂ ಇರುತ್ತಾರೆ. ಆದರೆ ದತ್ತು ಪಡೆಯಲು ನಿರ್ದಿಷ್ಟ ಕಾನೂನು ಪ್ರಕ್ರಿಯೆ ಇದ್ದು, ಅದನ್ನು ಪೂರೈಸಲೇಬೇಕು ಎನ್ನುತ್ತಾರೆ.
ಈ ಬಗ್ಗೆ ಮಾತನಾಡಿದ ತಮಿಳುನಾಡು ಮಕ್ಕಳ ಹಕ್ಕುಗಳ ನಿಗಾ ಸಮಿತಿಯ ರಾಜ್ಯ ಸಂಯೋಜಕ ಪ್ರೊ. ಆ್ಯಂಡ್ರೂ ಸೇಸುರಾಜ್, ಅನಾಥ ಮಕ್ಕಳ ಸಮಸ್ಯೆ ಇದ್ದರೆ ಆ ಮಾಹಿತಿಯನ್ನು 1098 ಸಹಾಯವಾಣಿಗೆ ನೀಡುವುದು ಕಡ್ಡಾಯ. ಅಲ್ಲಿನ ಅಧಿಕಾರಿಗಳು ಖಂಡಿತವಾಗಿಯೂ ಈ ಮಕ್ಕಳನ್ನು ರಕ್ಷಣೆ ಮಾಡುತ್ತಾರೆ ಹಾಗೂ ಮುಂದಿನ ಎಲ್ಲ ಪ್ರಕ್ರಿಯೆಗಳನ್ನು ನೋಡಿಕೊಳ್ಳುತ್ತಾರೆ. ಅಲ್ಲದೆ ಒಂದೊಮ್ಮೆ ಪೋಷಕರು ಕೋವಿಡ್ನಿಂದಾಗಿ ಆಸ್ಪತ್ರೆಯಲ್ಲಿದ್ದರೆ ಆಗಲೂ ಅವರ ಮಕ್ಕಳಿಗೆ ತಾತ್ಕಾಲಿಕವಾಗಿ ಆಶ್ರಯದ ವ್ಯವಸ್ಥೆ ಮಾಡುತ್ತಾರೆ ಎಂದು ಹೇಳಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ವಿ. ರಾಮರಾಜ ಮಾತನಾಡಿ, ಮಕ್ಕಳನ್ನು ದತ್ತು ನೀಡುವ ಸಂದೇಶಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು ಶಿಕ್ಷಾರ್ಹ ಅಪರಾಧ. ಇದರಿಂದ ಮಕ್ಕಳ ಅಕ್ರಮ ಸಾಗಾಟಕ್ಕೆ, ಮಾರಾಟಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಆಯೋಗ ಬದ್ಧವಾಗಿದೆ ಎಂದಿದ್ದಾರೆ.