ಕೊಯಂಬತ್ತೂರು (ತಮಿಳುನಾಡು) : ಇಲ್ಲಿನ ತಿರುಪುರದ ನಿರಾಶ್ರಿತ ಕೇಂದ್ರದಲ್ಲಿ ವಿಷಾಹಾರ ಸೇವಿಸಿ ಮೂವರು ಬಾಲಕರು ಸಾವನ್ನಪ್ಪಿದ್ದು, 11 ಮಂದಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ. ಮೃತರನ್ನು 8 ರಿಂದ13 ವರ್ಷದ ಮಕ್ಕಳು ಎಂದು ಹೇಳಲಾಗಿದೆ. ವಿಷಾಹಾರ ಸೇವಿಸಿರುವ ಶಂಕೆ ವ್ಯಕ್ತವಾಗಿದೆ.
ಇಲ್ಲಿನ ನಿರಾಶ್ರಿತ ಕೇಂದ್ರದ ಮಕ್ಕಳು ಬುಧವಾರ ರಾತ್ರಿ ರಸಮ್ ಮತ್ತು ಲಡ್ಡು ಮಿಶ್ರಿತ ಅನ್ನವನ್ನು ಸೇವಿಸಿರುವುದಾಗಿ ಹೇಳಲಾಗಿದೆ. ಬಳಿಕ ಅವರಲ್ಲಿ ಕೆಲವರಿಗೆ ವಾಂತಿ ಮತ್ತು ಭೇದಿ ಕಾಣಿಸಿಕೊಂಡಿರುವುದಾಗಿ ತಿಳಿದುಬಂದಿದೆ.
ಗುರುವಾರ ಬೆಳಿಗ್ಗೆ, ಈ ಆಹಾರ ಸೇವಿಸಿದವರಲ್ಲಿ ಕೆಲವರು ಪ್ರಜ್ಞಾಹೀನರಾಗಿದ್ದು, ತಕ್ಷಣ ಅವರೆಲ್ಲರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ . ಬಳಿಕ ಅಲ್ಲಿಂದ ತಿರುಪುರ ಮತ್ತು ಅವಿನಾಶಿಯ ಸರ್ಕಾರಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದುಬಂದಿದೆ. ಇದರಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೂವರು ಬಾಲಕರು ಆಸ್ಪತ್ರೆಯಲ್ಲೇ ಮೃತಪಟ್ಟಿದ್ದು, ಉಳಿದವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂವರನ್ನು ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಆಸ್ಪತ್ರೆಗೆ ಭೇಟಿ ನೀಡಿದ ತಿರುಪುರ್ ಜಿಲ್ಲಾಧಿಕಾರಿ ಎಸ್ ವಿನೀತ್ , ಆಹಾರದ ಬಗ್ಗೆ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದೆ. ವಿಚಾರಣೆಯ ನಂತರ ತಪ್ಪಿತಸ್ಥರೆಂದು ಕಂಡು ಬಂದಲ್ಲಿ ನಿರಾಶ್ರಿತರ ಕೇಂದ್ರದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರಕರಣ ಸಂಬಂಧ ಕೇಂದ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳ ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ :ಮಕ್ಕಳ ಕಳ್ಳರು ಎಂಬ ಶಂಕೆ: ಸಾಧುಗಳ ಮೇಲೆ ಹಲ್ಲೆ ನಡೆಸಿದ ಸಾರ್ವಜನಿಕರು.. VIDEO