ನೆಹರೂ ಅವರಿಗೆ ಮಕ್ಕಳೆಂದರೆ ಬಹಳ ಪ್ರೀತಿ. ಮಕ್ಕಳ ಮೇಲಿನ ಅವರ ವಾತ್ಸಲ್ಯ ಎಷ್ಟಿತ್ತು ಎಂದರೆ ಹೆಚ್ಚಿನ ಸಮಯವನ್ನು ಮಕ್ಕಳೊಂದಿಗೆ ಕಳೆಯುವುದಕ್ಕೆ ನೆಹರೂ ಬಯಸುತ್ತಿದ್ದರಂತೆ. ಆದ್ದರಿಂದಲೇ ಮಕ್ಕಳೆಲ್ಲರಿಗೂ ನೆಹರೂ ಎಂದಿಗೂ ಪ್ರೀತಿಯ ಚಾಚಾ ಆಗಿ ಇರುತ್ತಿದ್ದರು. ಮಕ್ಕಳು ಸಹ ಪ್ರೀತಿಯಿಂದ ಚಾಚಾ ಎಂದು ಕರೆಯುತ್ತಿದ್ದರು. ಇಂದಿಗೂ ನೆಹರು ಮಕ್ಕಳ ನೆಚ್ಚಿನ ಚಾಚಾ ಅಗಿಯೇ ಹೆಚ್ಚು ಹೆಸರುವಾಸಿ.
ಮಕ್ಕಳ ಹಕ್ಕುಗಳನ್ನು ರಕ್ಷಿಸಲು,ಅವರ ಆರೈಕೆ ಮತ್ತು ಶಿಕ್ಷಣದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. ಮಕ್ಕಳ ದಿನವನ್ನು ಬಾಲ್ ದಿವಸ್ ಎಂದು ಕರೆಯಲಾಗುತ್ತದೆ. ಚಾಚಾ ನೆಹರು ಅವರು ಮುಖ್ಯವಾಗಿ ಮಕ್ಕಳು ಮತ್ತು ಗುಲಾಬಿಗಳ ಮೇಲೆ ಹೆಚ್ಚು ಒಲವು ಹೊಂದಿದ್ದರು. ಜವಾಹರಲಾಲ್ ನೆಹರೂ ಅವರ ಪ್ರಕಾರ, ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಹಾಗಾಗಿ ಅವರನ್ನು ಎಚ್ಚರಿಕೆಯಿಂದ ಮತ್ತು ಪ್ರೀತಿಯಿಂದ ಸಾಕಬೇಕು ಎಂದು ಅವರು ಹೇಳಿದ್ದರು.
ಮಕ್ಕಳ ದಿನಾಚರಣೆಯ ಇತಿಹಾಸ ಮತ್ತು ಮಹತ್ವ:
ಭಾರತೀಯ ರಾಜಕಾರಣದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವುದರ ಜೊತೆಗೆ ಪಂಡಿತ್ ಜವಾಹರಲಾಲ್ ನೆಹರೂ ಅವರು ಮಕ್ಕಳ ಬಗ್ಗೆಯೂ ತುಂಬಾ ಒಲವು ಹೊಂದಿದ್ದರು. ಆಗಾಗ್ಗೆ ಅವರೊಂದಿಗೆ ಬೆರತು ಫೋಟೋ ಕೂಡ ತೆಗೆಸಿಕೊಳ್ಳುತ್ತಿದ್ದರು. ಮಕ್ಕಳ ಮೇಲೆ ಅವರಿಗಿದ್ದ ಪ್ರೀತಿ ಮತ್ತು ಜನಪ್ರಿಯತೆಯಿಂದಾಗಿ ಅವರನ್ನು ಚಾಚಾ ನೆಹರು ಎಂದು ಪ್ರೀತಿಯಿಂದ ಕರೆಯಲಾಗುತ್ತದೆ.
ಜವಾಹರಲಾಲ್ ನೆಹರು ಅವರು ಮಕ್ಕಳ ಮೇಲಿನ ವಾತ್ಸಲ್ಯ ಮತ್ತು ಪ್ರೀತಿಗೆ ಪ್ರಸಿದ್ಧರಾಗಿದ್ದರು. ಮಕ್ಕಳು ಶಿಕ್ಷಣವನ್ನು ಪೂರೈಸಬೇಕೆಂದು ಅವರು ಪ್ರತಿಪಾದಿಸಿದರು. “ಇಂದಿನ ಮಕ್ಕಳು ನಾಳೆಯ ಭಾರತವನ್ನು ನಿರ್ಮಾಣ ಮಾಡುತ್ತಾರೆ. ನಾವು ಅವರನ್ನು ಬೆಳೆಸುವ ವಿಧಾನವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ” ಎಂದು ಅವರು ಹೇಳುತ್ತಾರೆ. ಅವರು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದರು ಹಾಗೂ ದೇಶದಲ್ಲಿ ಕಾಲೇಜುಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.
ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ), ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಐಐಎಂ) ಮತ್ತು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್ಐಟಿ) ನಂತಹ ಭಾರತದ ಪ್ರತಿಷ್ಠಿತ ಸಂಸ್ಥೆಗಳ ಸ್ಥಾಪನೆಯಲ್ಲಿ ಅವರು ಮುಖ್ಯ ಪಾತ್ರ ವಹಿಸಿದ್ದಾರೆ. ಅವರು ಯಾವಾಗಲೂ ದೇಶದ ಯುವ ಮನಸ್ಸುಗಳನ್ನು ನಂಬಿದ್ದರು ಮತ್ತು ಅವರ ಕಲ್ಯಾಣ ಹಾಗೂ ಬೆಳವಣಿಗೆಗೆ ಒತ್ತು ನೀಡಿದರು. ಆದ್ದರಿಂದ ಅವರ ಜನ್ಮದಿನದಂದು ಭಾರತದ ಅನೇಕ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ನಡೆಸಲಾಗುತ್ತದೆ.
ಭಾರತದಲ್ಲಿ ಮಕ್ಕಳ ದಿನಾಚರಣೆ:
ಭಾರತದಾದ್ಯಂತ ಈ ದಿನದಂದು ಸಾಂಸ್ಕೃತಿಕ ಮತ್ತು ವಿನೋದ ಚಟುವಟಿಕೆಗಳು ಸೇರಿದಂತೆ ಬಹಳಷ್ಟು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು, ಶಾಲೆಗಳು, ಎನ್‌ಜಿಒಗಳು, ಖಾಸಗಿ ಸಂಸ್ಥೆಗಳು ಮತ್ತು ಇತರವುಗಳು ಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ತಿಳಿಸಲು ಮತ್ತು ಅವರಿಗೆ ಸಂತೋಷ ಹಾಗೂ ಉಲ್ಲಾಸವನ್ನುಂಟುಮಾಡಲು ವಿವಿಧ ರೀತಿಯ ಸ್ಪರ್ಧೆಗಳನ್ನು ನಡೆಸುತ್ತವೆ. ಟಿವಿ ಚಾನೆಲ್‌ಗಳು ನವೆಂಬರ್ 14 ರಂದು ಮಕ್ಕಳಿಗಾಗಿ ಆಸಕ್ತಿದಾಯಕ ಕಾರ್ಯಕ್ರಮಗಳನ್ನು ಪ್ರದರ್ಶಿಸುತ್ತವೆ. ತಮ್ಮ ಮಕ್ಕಳನ್ನು ಸಂತೋಷಪಡಿಸಲು ಪೋಷಕರು ಈ ಕಾರ್ಯಕ್ರಮದಲ್ಲಿ ಬಹಳ ಉತ್ಸಾಹದಿಂದ ಭಾಗವಹಿಸುತ್ತಾರೆ. ಅವರು ತಮ್ಮ ಪುತ್ರರು ಮತ್ತು ಪುತ್ರಿಯರಿಗೆ ಉಡುಗೊರೆಗಳನ್ನು, ಶುಭಾಶಯ ಪತ್ರಗಳನ್ನು ವಿತರಿಸುತ್ತಾರೆ. ಅವರು ಪಿಕ್ನಿಕ್, ಲಾಂಗ್ ಡ್ರೈವ್‌ನಲ್ಲಿ ಹೋಗುತ್ತಾರೆ ಮತ್ತು ಪಾರ್ಟಿಯೊಂದಿಗೆ ದಿನವನ್ನು ಆನಂದಿಸುತ್ತಾರೆ.
ವಿಶ್ವದಾದ್ಯಂತ ಮಕ್ಕಳ ದಿನಾಚರಣೆ:
ಪ್ರಪಂಚದಲ್ಲಿ ನವೆಂಬರ್ 20 ರಂದು ಮಕ್ಕಳ ದಿನಾಚರಣೆಯನ್ನು ಪ್ರತಿವರ್ಷ ಆಚರಿಸುವರು. ಈ ದಿನವನ್ನು ಮಕ್ಕಳ ಬಾಲ್ಯವನ್ನು ಸಂಭ್ರಮದಿಂದ ಕಾಣಲು ಆಚರಿಸಲಾಗುವುದು. ಈ ದಿನವನ್ನು ಬಾಲ್ಯದ ಹೆಸರಿನಲ್ಲಿ ಆಚರಿಸಲಾಗುವುದು.