ಗ್ವಾಲಿಯಾರ್:ಜಗತ್ತು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುನ್ನುಗ್ಗುತ್ತಿದ್ದರೂ ಕೆಲವು ಪ್ರದೇಶಗಳಲ್ಲಿ ಮೂಢನಂಬಿಕೆಗಳು ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಮಾಟ-ಮಂತ್ರಗಳ ನೆಪದಲ್ಲಿ ಮುಗ್ಧ ಜೀವಗಳು ಬಲಿಯಾಗುತ್ತಿವೆ.
15 ವರ್ಷಗಳಿಂದಲೂ ಸಂತಾನ ಭಾಗ್ಯ ಕಾಣದ ದಂಪತಿ ಮಕ್ಕಳನ್ನು ಪಡೆಯಲು ಮಂತ್ರವಾದಿಗಳತ್ತ ಮುಖ ಮಾಡಿದ್ದಾರೆ. ಮಂತ್ರವಾದಿಗಳು ಹೇಳಿದ ಪ್ರಕಾರ ನಡೆದುಕೊಂಡಿರುವ ದಂಪತಿ ಇಬ್ಬರು ಕಾಲ್ ಗರ್ಲ್ಸ್ ಅನ್ನು ಬಲಿ ಪಡೆದಿದ್ದಾರೆ.
ಪೊಲೀಸರ ತನಿಖೆ ಪ್ರಕಾರ, ಗ್ವಾಲಿಯಾರ್ ನಗರದ ನಿವಾಸಿ ಬಂಟು ಬದೌರಿಯಾ ಮತ್ತು ಮಮತಾ ದಂಪತಿಗೆ 15 ವರ್ಷಗಳ ಹಿಂದೆ ವಿವಾಹವಾಗಿದೆ. ಆದ್ರೆ ಅವರಿಗೆ ಇಲ್ಲಿಯವರೆಗೂ ಮಕ್ಕಳಾಗಿಲ್ಲ. ಮಕ್ಕಳನ್ನು ಹೊಂದುವ ಉದ್ದೇಶದಿಂದಾಗಿ ಬದೌರಿಯಾ ದಂಪತಿ ತಮ್ಮ ಸ್ನೇಹಿತ ನೀರಜ್ ಪರ್ಮಾರ್‌ನನ್ನು ಭೇಟಿ ಮಾಡಿದ್ದಾರೆ. ನೀರಜ್ ಬೇರಾರೂ ಅಲ್ಲ, ಬಂಟು ಪತ್ನಿಯ ಸಹೋದರಿಯ ಬಾಯ್ಫ್ರೆಂಡ್ ಆಗಿದ್ದಾನೆ ಎಂದು ಗ್ವಾಲಿಯಾರ್ ಎಸ್ಪಿ ಅಮಿತ್ ಸಾಂಘಿ ಹೇಳಿದ್ದಾರೆ.
ಮಾಟಮಂತ್ರ ಮಾಡುತ್ತಿದ್ದ ಮಂತ್ರವಾದಿ ಗಿರ್ವಾರ್ ಯಾದವ್ ಬಳಿ ಬಂಟು ಬದೌರಿಯಾರನ್ನು ದಂಪತಿಯನ್ನು ನೀರಜ್ ಕರೆದೊಯ್ದಿದ್ದಾನೆ. ಆದ್ರೆ ವ್ಯಕ್ತಿಯೊಬ್ಬರ ಬಲಿ ನೀಡಿದ್ರೆ ನಿಮಗೆ ಸಂತಾನ ಭಾಗ್ಯ ಸಿಗುತ್ತೆ ಎಂದು ಮಂತ್ರವಾದಿ ಬದೌರಿಯಾ ದಂಪತಿಗೆ ನಂಬಿಸಿದ್ದಾನೆ. ಇದನ್ನು ನಂಬಿದ ದಂಪತಿ ವ್ಯಕ್ತಿಯನ್ನು ಬಲಿ ನೀಡಲು ಮುಂದಾಗಿದ್ದಾರೆ.
ಬಲಿಗಾಗಿ ವ್ಯಕ್ತಿ ಹುಡುಕಾಟದಲ್ಲಿ ನೀರಜ್ ಪರ್ಮಾರ್ ನಿರತರಾಗಿದ್ದನು. ಈ ತಿಂಗಳು 13ನೇ ದಿನಾಂಕದಂದು ಸೆಕ್ಸ್ ವರ್ಕರ್ವೊಬ್ಬಳನ್ನು ಕರೆದೊಯ್ದು ಕೊಲೆ ಮಾಡಿದ್ದಾನೆ. ಬಳಿಕ ಆಕೆಯ ಶವವನ್ನು ನೀರಜ್ ಮತ್ತು ನೀರಜ್ನ ಗರ್ಲ್ಫ್ರೆಂಡ್ ಬೈಕ್ ಮೇಲೆ ತರಲು ಯತ್ನಿಸಿದ್ದಾರೆ. ಈ ವೇಳೆ ರಸ್ತೆ ಮಧ್ಯೆದಲ್ಲಿ ಶವ ಕೆಳಗೆ ಬಿದ್ದಿದೆ. ಇದರಿಂದ ಗಾಬರಿಗೊಂಡ ಇಬ್ಬರು ಶವವನ್ನು ರಸ್ತೆಯ ಪಕ್ಕದಲ್ಲೇ ಎಸೆದು, ಆಕೆಯ ದೇಹದ ಮೇಲೆ ಎಲೆಗಳನ್ನು ಮುಚ್ಚಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಷ್ಟಾದ್ರೂ ಸಹ ಅವರು ಬಲಿ ವಿಷಯದಲ್ಲಿ ಹಿಂದೆ ಸರಿಯಲಿಲ್ಲ. ವಾರದ ಬಳಿಕ ಅಂದ್ರೆ ಅಕ್ಟೋಬರ್ 20ಕ್ಕೆ ಮತ್ತೊಂದು ಕಾಲ್ ಗರ್ಲ್ ಕರೆಸಿ ಆಕೆಗೆ ಮತ್ತು ಬರುವ ಔಷಧಿ ನೀಡಿ ಮಂತ್ರವಾದಿ ಬಳಿ ಕರೆದೊಯ್ದಿದ್ದಾರೆ. ಬಳಿಕ ಮಂತ್ರವಾದಿ ಪೂಜೆ ಮಾಡಿ ಆಕೆಯನ್ನು ಬಲಿ ಕೊಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಮೊದಲು ಸಾವನ್ನಪ್ಪಿದ್ದ ಕಾಲ್ ಗರ್ಲ್ ದೇಹ ರಸ್ತೆ ಪಕ್ಕದಲ್ಲಿ ಬಿದ್ದಿರುವ ಸಂಗತಿ ಈ ತಿಂಗಳು 21ಕ್ಕೆ ಪೊಲೀಸರಿಗೆ ದೊರೆತಿತ್ತು. ಕೂಡಲೇ ಪೊಲೀಸರು ತನಿಖೆ ಪ್ರಾರಂಭಿಸಿದಾಗ ಪ್ರಮುಖ ಆರೋಪಿ ನೀರಜ್ ಸಿಕ್ಕಿಬಿದ್ದಿದ್ದಾನೆ. ಬಳಿಕ ನೀರಜ್ ನಡೆದ ಘಟನೆ ಬಗ್ಗೆ ಪೊಲೀಸರ ಮುಂದೆ ಎಳೆ-ಎಳೆಯಾಗಿ ಬಿಡಿಸಿ ಹೇಳಿದ್ದಾನೆ. ನಂತರ ಪೊಲೀಸರು ಮಂತ್ರವಾದಿ ಸಹಿತ ಐವರನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.