ನಳಂದಾ(ಬಿಹಾರ):ಮನೆಯಲ್ಲಿ ಶಿಕ್ಷಣಕ್ಕಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದ್ರೂ, ಅದೆಷ್ಟೋ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಲು ಮುಂದಾಗುವುದಿಲ್ಲ. ಆದರೆ, ಇಲ್ಲೋರ್ವ ಬಡ ವಿದ್ಯಾರ್ಥಿ ಖುದ್ದಾಗಿ ಮುಖ್ಯಮಂತ್ರಿ ಬಳಿ ಬಂದು ತನಗೆ ಅಧ್ಯಯನಕ್ಕಾಗಿ ಸಹಾಯ ಮಾಡಿ ಎಂದು ಕೈಮುಗಿದು ಮನವಿ ಮಾಡಿಕೊಂಡಿದ್ದಾನೆ. ಬಿಹಾರದ ನಳಂದಾದಲ್ಲಿ ಈ ಅಪರೂಪದ ಘಟನೆ ನಡೆದಿದೆ.
ಮುಖ್ಯಮಂತ್ರಿ ಬಳಿ ಅಳಲು ಹೇಳಿಕೊಂಡ ವಿದ್ಯಾರ್ಥಿ 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಸೋನು ಎಂಬಾತ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಬಳಿ ಬಂದು ತನ್ನ ಕುಟುಂಬದ ಕಷ್ಟ ಹೇಳಿಕೊಳ್ಳುವುದರ ಜೊತೆಗೆ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುವಂತೆ ಕೋರಿಕೊಂಡಿದ್ದಾನೆ. ನಳಂದಾದಲ್ಲಿ ಆಯೋಜನೆಗೊಂಡಿದ್ದ ಸಾರ್ವಜನಿಕ ಅಹವಾಲು ಸಮಾರಂಭದ ವೇಳೆ ಬಾಲಕನ ನಡೆ ಎಲ್ಲರ ಮೆಚ್ಚುಗೆಗೆ ಕಾರಣವಾಗಿದೆ.
ಏನಿದು ಪ್ರಕರಣ?: ನಳಂದಾದ ಹರ್ನೌತ್ ಬ್ಲಾಕ್ನ 11 ವರ್ಷದ ವಿದ್ಯಾರ್ಥಿ ಸೋನು ಕುಮಾರ್, ನೇರವಾಗಿ ಮುಖ್ಯಮಂತ್ರಿಗಳನ್ನ ಸಂಪರ್ಕಿಸಿದ್ದಾನೆ. ಈ ವೇಳೆ ತನ್ನ ಅಧ್ಯಯನಕ್ಕೆ ಸಂಬಂಧಿಸಿದಂತೆ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾನೆ. ತನ್ನ ತಂದೆ ರಣವಿಜಯ್ ಮೊಸರು ಅಂಗಡಿ ನಡೆಸುತ್ತಿದ್ದು, ಇಲ್ಲಿ ಬರುವ ಹಣವನ್ನ ಕೇವಲ ಮದ್ಯಪಾನ ಮಾಡಲು ಖರ್ಚು ಮಾಡುತ್ತಿದ್ದಾರೆ. ಹೀಗಾಗಿ, ತನಗೆ ಆರ್ಥಿಕವಾಗಿ ಸಹಾಯ ಮಾಡುವಂತೆ ಬಾಲಕ ಕೇಳಿಕೊಂಡಿದ್ದಾನೆ.
ಇದನ್ನೂ ಓದಿ:ಬಾಲಿವುಡ್ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾದ 'ಗಬ್ಬರ್ ಸಿಂಗ್'.. ಬಿಗ್ ಬಜೆಟ್ ಚಿತ್ರಕ್ಕಾಗಿ ಧವನ್ ತಯಾರಿ
ಜೊತೆಗೆ ಸರ್ಕಾರಿ ಶಾಲೆಗಳಲ್ಲಿ ಸರಿಯಾದ ಶಿಕ್ಷಣ ಸಿಗುತ್ತಿಲ್ಲ ಎಂಬುದು ನನ್ನ ಮನವಿ. ಉತ್ತಮವಾದ ಶಿಕ್ಷಣ ಕಲಿಯಲು ನನಗೆ ಸಹಾಯ ಬೇಕು ಎಂದಿದ್ದಾನೆ. ಇದರ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿರುವ ಸೋನು, 6ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ನಾನು, ಮುಂದಿನ ಶಿಕ್ಷಣಕ್ಕಾಗಿ ಸಿಎಂ ಬಳಿ ಮನವಿ ಮಾಡಿಕೊಂಡಿರುವುದಾಗಿ ಹೇಳಿಕೊಂಡಿದ್ದಾನೆ. ನನ್ನ ಮಾತು ಆಲಿಸಿರುವ ಮುಖ್ಯಮಂತ್ರಿ ಅವರು ಅಧ್ಯಯನಕ್ಕಾಗಿ ಸಹಾಯ ಮಾಡುವ ಭರವಸೆ ನೀಡಿದ್ದಾರೆ. ನನಗೆ ಸಹಾಯ ಮಾಡಿದರೆ, ಚೆನ್ನಾಗಿ ಓದಿ, ಐಎಎಸ್ ಅಥವಾ ಐಪಿಎಸ್ ಆಗಬೇಕೆಂಬ ಆಸೆ ಇದೆ ಎಂದಿದ್ದಾನೆ.
ವಿದ್ಯಾರ್ಥಿ ಜೊತೆ ತೇಜ್ ಪ್ರತಾಪ್ ಯಾದವ್ ವಿಡಿಯೋ ಕಾಲ್ ತೇಜ್ ಪ್ರತಾಪ್ ವಿಡಿಯೋ ಕಾಲ್:ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದಂತೆ,ವಿದ್ಯಾರ್ಥಿ ಜೊತೆ ವಿಡಿಯೋ ಕಾಲ್ ಮೂಲಕ ಆರ್ಜೆಡಿ ನಾಯಕ ತೇಜ್ ಪ್ರತಾಪ್ ಮಾತನಾಡಿದ್ದು, ಆತನ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಶಿಕ್ಷಣಕ್ಕೆ ಬೇಕಾದ ಎಲ್ಲ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಐಎಎಸ್ ಆದ ಬಳಿಕ ನನ್ನ ಬಳಿ ಕೆಲಸ ಮಾಡುತ್ತೀಯಾ? ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ಪ್ರತಿಕ್ರಿಯೆ ನೀಡಿರುವ ಬಾಲಕ ಸೋನು, ತಾನು ಯಾರ ಕೈಕೆಳಗೂ ಕೆಲಸ ಮಾಡಲ್ಲ ಎಂದಿದ್ದಾನೆ.