ಥಾಣೆ/ಲೂಧಿಯಾನ : ಹಾರುತ್ತಿದ್ದ ಗಾಳಿಪಟದ ದಾರವೊಂದು ವ್ಯಕ್ತಿಯ ಕೊರಳಿಗೆ ಸಿಲುಕಿ ಅವರು ಕುತ್ತಿಗೆ ಕೊಯ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಭಿವಂಡಿಯ ದಿವಂಗತ ಬಾಳಾಸಾಹೇಬ್ ಠಾಕ್ರೆ ಸೇತುವೆ ಮೇಲೆ ಸಂಭವಿಸಿದೆ. ಇಲ್ಲಿನ ಉಲ್ಲಾಸ ನಗರ ನಿವಾಸಿ 47 ವರ್ಷದ ಸಂಜಯ್ ಹಜಾರೆ ಸಾವನ್ನಪ್ಪಿದ ವ್ಯಕ್ತಿ ಎಂದು ಗುರುತಿಸಲಾಗಿದೆ.
ಸಂಜಯ್ ತನ್ನ ಕುಟುಂಬದೊಂದಿಗೆ ಉಲ್ಲಾಸನಗರದಲ್ಲಿ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಮಕರ ಸಂಕ್ರಾತಿಯ ದಿನ ಸಂಜೆ ಹೊತ್ತಿಗೆ ಭಿವಂಡಿಯಿಂದ ಕೆಲಸ ಮುಗಿಸಿ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದರು. ದಿ. ಬಾಳಾಸಾಹೇಬ್ ಠಾಕ್ರೆ ಮೇಲ್ಸೇತುವೆಯಿಂದ ಮನೆ ಕಡೆಗೆ ಸಂಚರಿಸುತ್ತಿದ್ದಾಗ ರಸ್ತೆಯಲ್ಲಿ ಹಾರುತ್ತಿದ್ದ ಗಾಳಿಪಟದ ದಾರ (ಮಾಂಜಾ) ಏಕಾಏಕಿ ಅವರ ಕತ್ತಿಗೆ ಸಿಲುಕಿಕೊಂಡಿದೆ. ಸಂಜಯ್ ಕತ್ತು ಕೊಯ್ದಿದ್ದು ಬೈಕ್ ರಸ್ತೆ ಬದಿಗೆ ಡಿಕ್ಕಿ ಹೊಡೆಯಿತು. ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಪಡೆದ ಭಿವಂಡಿ ಪೊಲೀಸ್ ತಂಡ ಸ್ಥಳಕ್ಕಾಗಮಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದೆ.
ಚೀನಾ ಮಾಂಜಾದಿಂದ ಹಲವೆಡೆ ಅಪಘಾತ ಸಂಭವಿಸಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ. ಒಂದೆಡೆ ಚೈನಾ ಮಾಂಜಾ ನಿಷೇಧದ ನಡುವೆಯೂ ಗಾಳಿಪಟ ಹಾರಿಸಲು ಈ ದಾರ ಬಳಕೆಯಾಗುತ್ತಿದೆ. ಇದರಿಂದಾಗಿ ಪ್ರತಿವರ್ಷ ಮಕರ ಸಂಕ್ರಾಂತಿ ಹಬ್ಬದಂದು ಗಾಳಿಪಟ ಹಾರಿಸುವ ಸಂದರ್ಭದಲ್ಲಿ ಅವಘಡಗಳು ಮುನ್ನೆಲೆಗೆ ಬರುತ್ತಿವೆ.
ಕೆಲ ವರ್ಷಗಳ ಹಿಂದೆ ಗಾಳಿಪಟ ಹಾರಿಸಲು ಸರಳವಾದ ಹತ್ತಿಯ ದಾರವನ್ನು ಬಳಸಲಾಗುತ್ತಿತ್ತು. ಈ ದಾರ ಸ್ಪರ್ಧೆಯ ಸಂದರ್ಭದಲ್ಲಿ ಹರಿದು ಹೋಗುತ್ತಿತ್ತು. ಆದ್ರೆ ಚೀನಿಯರು ತಮ್ಮ ಗಾಳಿಪಟಗಳನ್ನು ಸುರಕ್ಷಿತವಾಗಿರಿಸಲು ಮತ್ತು ಎದುರಾಳಿಗಳ ಗಾಳಿಪಟಗಳನ್ನು ಕತ್ತರಿಸಲು ಮಾಂಜಾ ದಾರಾ ಬಳಸುತ್ತಾರೆ. ಇದನ್ನು ಗಾಜಿನ ಪುಡಿಯಿಂದ ತಯಾರಿಸಲಾಗುತ್ತಿದ್ದು, ಅಷ್ಟು ಸುಲಭವಾಗಿ ಹರಿಯುವುದಿಲ್ಲ. ಆದರೆ ಇದು ಬೈಕ್ ಸವಾರನ ಕುತ್ತಿಗೆಗೆ ಸಿಕ್ಕಿಹಾಕಿಕೊಂಡರೆ ಕತ್ತು ಕೊಯ್ದು ಪ್ರಾಣ ಹಾನಿ ಸಂಭವಿಸುತ್ತದೆ. ಹೀಗಾಗಿ ಗಾಳಿಪಟ ಹಾರಾಟದಲ್ಲಿ ಬಳಸುವ ಅಪಾಯಕಾರಿ ಚೀನಾದ ಮಾಂಜಾ ದಾರಾ ನಿಷೇಧಿಸಲಾಗಿದೆ. ಆದ್ರೂ ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆಯೇ? ಎಂಬುದನ್ನು ಪರಿಶೀಲಿಸಬೇಕಿದೆ.