ಆಗ್ರಾ:ಉತ್ತರ ಪ್ರದೇಶದ ಬಾಹ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಯಿ ಕಡಿತಕ್ಕೆ ಒಳಗಾದ ಬಾಲಕನಲ್ಲಿ ರೇಬಿಸ್ ರೋಗ ಹರಡಿದೆ. ಮಗುವಿನ ಸ್ಥಿತಿ ಹದಗೆಟ್ಟು, ವಿಚಿತ್ರವಾಗಿ ವರ್ತಿಸಲು ಶುರು ಮಾಡಿದಾಗ ಸಂಬಂಧಿಕರು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಬಾಲಕ ಮೃತಪಟ್ಟಿದ್ದಾನೆ.
ಬಾಹ್ ಪೊಲೀಸ್ ಠಾಣಾ ವ್ಯಾಪ್ತಿಯ ರುದ್ಮುಲಿ ಗ್ರಾಮದಲ್ಲಿ ವಾಸಿಸುವ ಅರವಿಂದ್ ಭಡೋರಿಯಾ ಅವರ ಮಗ ನೈತಿಕ್ (8) ಅಚ್ಚೇಲಾಲ್ ಪಬ್ಲಿಕ್ ಸ್ಕೂಲ್‌ನಲ್ಲಿ 4ನೇ ತರಗತಿಯಲ್ಲಿ ಓದುತ್ತಿದ್ದ. ಸುಮಾರು ಒಂದೂವರೆ ತಿಂಗಳ ಹಿಂದೆ ಮಗುವಿಗೆ ನಾಯಿ ಕಚ್ಚಿದ್ದು, ಈ ಬಗ್ಗೆ ಮಗು ತನ್ನ ಕುಟುಂಬ ಸದಸ್ಯರಿಗೆ ತಿಳಿಸಿರಲಿಲ್ಲ. ಕಳೆದ ಕೆಲವು ದಿನಗಳಿಂದ ಮಗು ವಿಚಿತ್ರವಾಗಿ ವರ್ತಿಸುತ್ತಿದ್ದರೂ ಮನೆಯವರಿಗೆ ಅರ್ಥವಾಗುತ್ತಿರಲಿಲ್ಲ. ಮಗು ಚೇಷ್ಟೆ ಮಾಡುತ್ತಿದೆ ಎಂದು ಸುಮ್ಮನಾಗಿದ್ದಾರೆ.
ನಾಯಿ ಕಡಿತದಿಂದ ಮಗುವಿನ ದೇಹದಲ್ಲಿ ರೇಬಿಸ್ ಸೋಂಕು ಹೆಚ್ಚಾಗಿದೆ. ಇದರಿಂದ ಮಗುವಿನ ಆರೋಗ್ಯವು ಇದ್ದಕ್ಕಿದ್ದಂತೆ ಹದಗೆಟ್ಟಿದೆ. ಅಲ್ಲದೇ ಮಗು ನಾಯಿಯಂತೆ ವಿಚಿತ್ರವಾಗಿ ವರ್ತಿಸಲು ಪ್ರಾರಂಭಿಸಿದೆ. ಇದಾದ ಬಳಿಕ ಸಂಬಂಧಿಕರು ಮಗುವನ್ನು ಚಿಕಿತ್ಸೆಗಾಗಿ ಆಗ್ರಾದ ಎಸ್‌ಎನ್ ಮೆಡಿಕಲ್ ಕಾಲೇಜಿಗೆ ದಾಖಲಿಸಿದ್ದಾರೆ. ಚಿಕಿತ್ಸೆ ಬಳಿಕ ಪರಿಸ್ಥಿತಿ ಸುಧಾರಿಸದ ಹಿನ್ನೆಲೆ ಸಂಬಂಧಿಕರು ನೈತಿಕ್ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇದನ್ನೂ ಓದಿ:3 ಡೋಸ್ ಲಸಿಕೆ ಪಡೆದ ಬಾಲಕಿ ರೇಬಿಸ್ಗೆ ಬಲಿ.. ವ್ಯಾಕ್ಸಿನ್ ಗುಣಮಟ್ಟದ ಮೇಲೆ ಶಂಕೆ
ರೇಬಿಸ್ ಸೋಂಕು ಹೆಚ್ಚಾದ ಹಿನ್ನೆಲೆ ಮಗು ಸೋಮವಾರ ಮೃತಪಟ್ಟಿದೆ. ಸಂಬಂಧಿಕರು ಮಗುವಿನ ಮೃತದೇಹವನ್ನು ಮನೆಗೆ ತಂದು ಮಂಗಳವಾರ ಅಂತ್ಯಕ್ರಿಯೆ ನಡೆಸಿದ್ದಾರೆ. ಸಂಬಂಧಿಕರು ಮತ್ತು ಗ್ರಾಮಸ್ಥರ ಪ್ರಕಾರ, ಈ ಪ್ರದೇಶದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಅನೇಕ ಮಕ್ಕಳು ಮತ್ತು ಗ್ರಾಮಸ್ಥರಿಗೆ ಬೀದಿ ನಾಯಿಗಳು ಕಚ್ಚಿವೆ.