ಅಜಂಗಢ ( ಉತ್ತರ ಪ್ರದೇಶ):ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಮೊಬೈಲ್ನಲ್ಲಿ ಲೂಡೋ ಆಡವಾಡುತ್ತಿದ್ದ ಎಂಟು ವರ್ಷದ ಮಗನನ್ನು ತಂದೆ ಹೊಡೆದು ಕೊಲೆ ಮಾಡಿ, ನಂತರ ರಹಸ್ಯವಾಗಿ ಅಂತ್ಯಕ್ರಿಯೆ ಮಾಡಿದ್ದಾನೆ. ನಂತರ ಈ ವಿಷಯ ಯಾರಿಗೂ ತಿಳಿಯದಂತೆ ಪತ್ನಿಗೆ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ.
ಇಲ್ಲಿನ ರೌನಪರ್ ಪೊಲೀಸ್ ಠಾಣೆ ವ್ಯಾಪ್ತಿಯ ಮಹುಲಾ ಬಗೀಚಾ ಗ್ರಾಮದಲ್ಲಿ ಜೂ.9ರಂದು ಈ ಘಟನೆ ನಡೆದಿದೆ. ಅಂದು ಬಾಲಕ ಧರ್ಮವೀರ್ (8) ಮನೆಯ ಬಳಿಯೇ ಮೇಕೆ ಮೇಯಿಸುತ್ತಿದ್ದ. ಇದರ ನಡುವೆ ಬಿಡುವಿನ ವೇಳೆಯಲ್ಲಿ ಮೊಬೈಲ್ನಲ್ಲಿ ಲೂಡೋ ಆಡುತ್ತಿದ್ದ. ಇದನ್ನು ಕಂಡ ತಂದೆ ಜಿತೇಂದ್ರ ಕೋಪಗೊಂಡ ಮಗನಿಗೆ ತೀವ್ರವಾಗಿ ಥಳಿಸಿದ್ದಾನೆ. ಇದಾದ ಬಳಿಕ ಮನೆಗೆ ಕರೆದೊಯ್ದು ಕೊಠಡಿಯಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾನೆ. ನಂತರ ರಾತ್ರಿ 9.30ರ ಸುಮಾರಿಗೆ ಕೊಠಡಿಗೆ ಹೋಗಿ ನೋಡಿದಾಗ ಧರ್ಮವೀರ್ ಸಾವನ್ನಪ್ಪಿದ್ದಾನೆ.
ರಹಸ್ಯವಾಗಿ ಅಂತ್ಯಕ್ರಿಯೆ: ತಾನು ಥಳಿಸಿರುವುದರಿಂದಲೇ ಮಗ ಮೃತಪಟ್ಟಿರುವುದನ್ನು ಅರಿತ ಆರೋಪಿ ತಂದೆ ಜಿತೇಂದ್ರ ನಂತರ ರಹಸ್ಯವಾಗಿ ಅಂತ್ಯಕ್ರಿಯೆ ಮಾಡಿದ್ದಾನೆ. ತನ್ನ ಸಹೋದರ ಉಪೇಂದ್ರ ಮತ್ತು ನೆರೆಮನೆಯ ಮತ್ತೊಬ್ಬ ವ್ಯಕ್ತಿಯ ಸಹಾಯದಿಂದ ಪಾಪಿ ತಂದೆ ಮಗನ ಶವವನ್ನು ಗೋಣಿಚೀಲಗಳಲ್ಲಿ ಹಾಕಿಕೊಂಡು ನದಿಯ ದಡದಲ್ಲಿ ಮಣ್ಣು ಮಾಡಿ ಬಂದಿದ್ದಾನೆ.