ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಸಂದರ್ಭದಲ್ಲಿ ದಾಖಲೆಯ 2.5 ಕೋಟಿ ಜನರಿಗೆ ಕೋವಿಡ್ -19 ಲಸಿಕೆ ವಿತರಿಸಿದಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕ ಪಿ ಚಿದಂಬರಂ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ಗಳನ್ನು ಮಾಡಿರುವ ಚಿದಂಬರಂ, "ನಿನ್ನೆ 2.5 ಕೋಟಿ ಡೋಸ್ ವ್ಯಾಕ್ಸಿನೇಷನ್ ಆಗಿದ್ದಕ್ಕೆ ಸಂತೋಷವಿದೆ. ಆದರೆ, ಇದಕ್ಕಾಗಿ ನಾನು ಪ್ರಧಾನಿ ಮೋದಿಯ ಜನ್ಮದಿನಕ್ಕಾಗಿ ಏಕೆ ಕಾಯಬೇಕಿತ್ತು? ಕಳೆದ ಡಿಸೆಂಬರ್ 31ರಂದು ಮೋದಿ ಬರ್ತ್ ಡೇ ಬಂದಿದ್ರೆ ಇಷ್ಟು ದೊಡ್ಡ ಮಟ್ಟದಲ್ಲಿ ವ್ಯಾಕ್ಸಿನೇಷನ್ ಆಗ್ತಿತ್ತಾ? ವ್ಯಾಕ್ಸಿನೇಷನ್ ಅಂದ್ರೆ ಹುಟ್ಟುಹಬ್ಬದಂದು ಕೇಕ್ ಕತ್ತರಿಸಿದಂತೆ ಅಲ್ಲ" ಎಂದು ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ಹುಟ್ಟುಹಬ್ಬದಂದು ದಾಖಲೆಯ ವ್ಯಾಕ್ಸಿನೇಷನ್: 'ನಿನ್ನೆ ನನಗೆ ಅತ್ಯಂತ ಭಾವನಾತ್ಮಕ ದಿನವಾಗಿತ್ತು' ಎಂದ ಮೋದಿ
"ವ್ಯಾಕ್ಸಿನೇಷನ್ -ಇದೊಂದು ಕಾರ್ಯಕ್ರಮ, ಇದೊಂದು ಪ್ರಕ್ರಿಯೆ. ಇದನ್ನು ಪ್ರತಿ ದಿನವೂ ವೇಗಗೊಳಿಸಬೇಕೇ ಹೊರತು ಪ್ರಧಾನಿಯ ಹುಟ್ಟುಹಬ್ಬದಂದು ಮಾತ್ರವಲ್ಲ. ಇನ್ನೂ ಕೂಡ ವಯಸ್ಕ ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರು ಮೊದಲ ಡೋಸ್ ಅನ್ನೇ ಪಡೆದಿಲ್ಲ. ಶೇ.21 ರಷ್ಟು ಜನರಿಗೆ ಮಾತ್ರ ಸಂಪೂರ್ಣವಾಗಿ ಲಸಿಕೆ ಹಾಕಲಾಗಿದೆ" ಎಂದು ಟ್ವೀಟ್ ಮಾಡಿದ್ದಾರೆ.
"ಬಿಜೆಪಿ ಆಡಳಿತವಿರುವ ರಾಜ್ಯಗಳಾದ ಉತ್ತರ ಪ್ರದೇಶ, ಮಧ್ಯಪ್ರದೇಶ, ಗುಜರಾತ್ ಮತ್ತು ಕರ್ನಾಟಕದಲ್ಲಿ ದಿನನಿತ್ಯದ ಸರಾಸರಿಗಿಂತ ದಾಖಲೆಯ ಮಟ್ಟದಲ್ಲಿ ಲಸಿಕೆ ವಿತರಿಸಲಾಗಿದೆ. ಬೇರೆ ದಿನಗಳಲ್ಲಿ 'ಕಾರ್ಯ ನಿರ್ವಹಿಸದ' ಆ ರಾಜ್ಯಗಳು ಪ್ರತಿದಿನವೂ ಪ್ರಧಾನಿಯ ಹುಟ್ಟುಹಬ್ಬವನ್ನು ಆಚರಿಸಲಿ" ಎಂದು ಚಿದಂಬರಂ ವ್ಯಂಗ್ಯವಾಡಿದ್ದಾರೆ.