ನವದೆಹಲಿ:ಕೃಷಿ ಕಾಯ್ದೆಗಳ ವಿಚಾರವಾಗಿ ಪ್ರತಿಭಟನಾ ನಿರತ ರೈತರೊಂದಿಗಿನ ಮಾತುಕತೆ ವಿಫಲವಾದ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ಕಿಡಿಕಾರಿದ್ದಾರೆ. ಪ್ರತಿಭಟನಾನಿರತ ರೈತರ ಸಮಸ್ಯೆಗಳನ್ನು ಆಲಿಸುವಂತೆ ಆಗ್ರಹಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪಿ.ಚಿದಂಬರಂ ರೈತರ ವಾಸ್ತವ ಸ್ಥಿತಿಯನ್ನು ಅರಿತುಕೊಂಡಿಲ್ಲ. ಭಾರತದ ಕೃಷಿ ಅವಲಂಬಿತ ಗ್ರಾಮಗಳಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬರಿಗಾಲಿನಲ್ಲಿ ನಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಅವರು ನಗರಗಳು ಮತ್ತು ಪಟ್ಟಣಗಳಲ್ಲಿ ಕೆಳ ಮಧ್ಯಮ ವರ್ಗದವರು ಮತ್ತು ಬಡವರ ಮನೆಗಳಿಗೆ ಭೇಟಿ ನೀಡಬೇಕು. ಬಡವರ ಸಂಪಾದನೆಯೇನು? ಏನು ತಿನ್ನುತ್ತಾರೆ? ಏನು ಧರಿಸುತ್ತಾರೆ ಎಂಬುದನ್ನು ಒಮ್ಮೆ ಪರಿಶೀಲನೆ ನಡೆಸಬೇಕು ಎಂದು ಚಿದಂಬರಂ ಆಗ್ರಹಿಸಿದ್ದಾರೆ.
ರೈತ ಪ್ರತಿಭಟನೆ ಬಗ್ಗೆ ಉಲ್ಲೇಖಿಸಿರುವ ಅವರು ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಿಂದ ಹೊರಟ ಸಾವಿರಾರು ರೈತರು ದೆಹಲಿಯ ಗಡಿಗಳಲ್ಲಿ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಕುರಿತು ಗಮನ ಹರಿಸಬೇಕು ಎಂದು ಚಿದಂಬರಂ ಹೇಳಿದ್ದಾರೆ.
ಇದನ್ನೂ ಓದಿ:8 ವರ್ಷದ ಪ್ರೇಮ.. ಮೂರು ಬಾರಿ ಅಬಾರ್ಷನ್, ಹಲ್ಲೆ.. ಪೊಲೀಸ್ ಮೊರೆ ಹೋದ ಯುವತಿ