ನವದೆಹಲಿ :ಜಮ್ಮು ಮತ್ತು ಕಾಶ್ಮೀರಕ್ಕೆ ಪುನಃ ರಾಜ್ಯದ ಸ್ಥಾನಮಾನ ನೀಡುವಂತೆ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಒತ್ತಾಯಿಸಿದ್ದಾರೆ. ಮುಂಬರುವ ಅಧಿವೇಶನದಲ್ಲಿ ಈ ಬಗ್ಗೆ ಚರ್ಚೆ ನಡೆಸಿ, ಕಾಶ್ಮೀರದಲ್ಲಿ ಜಾರಿ ಮಾಡಿರುವ ಅಹಿತಕರ ಕಾನೂನುಗಳನ್ನು ರದ್ದುಗೊಳಿಸಿ, ಯಥಾಸ್ಥಿತಿ ಮರು ಸ್ಥಾಪಿಸಬೇಕು ಎಂದು ಆಗ್ರಹಿಸಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವುದೊಂದೇ ಪ್ರಸ್ತುತ ಕಾಶ್ಮೀರದ ಸಮಸ್ಯೆಗಿರುವ ಏಕೈಕ ರಾಜಕೀಯ ಪರಿಹಾರ ಎಂದು ಅವರು ಉಲ್ಲೇಖಿಸಿದ್ದಾರೆ. ಸಂವಿಧಾನ ಮೂಲಕ ಒದಗಿಸಲಾದ ವ್ಯವಸ್ಥೆಯನ್ನು ಸಂಸತ್ತಿನಲ್ಲಿ ಕಾಯ್ದೆ ರೂಪಿಸಿ, ತಪ್ಪಾಗಿ ವಿಶ್ಲೇಷಿಸಿ ಮತ್ತು ಸಂವಿಧಾನದ ಅಂಶಗಳನ್ನು ದುರ್ಬಳಕೆ ಮಾಡಿಕೊಂಡು ಬದಲಿಸುವಂತಿಲ್ಲ.
ಕಾಶ್ಮೀರ ಒಂದು ರಾಜ್ಯವಾಗಿತ್ತು. ಅದರ ಸ್ಥಾನಮಾನ ಮುಂದೆಯೂ ಇರಬೇಕು. ಅಲ್ಲಿನ ಜನರ ಹಕ್ಕುಗಳನ್ನು ಮತ್ತು ಆಶಯಗಳನ್ನು ಗೌರವಿಸಬೇಕು ಎಂದು ಅವರು ಸರಣಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ವಿಷಯಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಯವರು ಜೂನ್ 24ರಂದು ಜಮ್ಮು ಮತ್ತು ಕಾಶ್ಮೀರದ 14 ರಾಜಕೀಯ ಮುಖಂಡರು ಮತ್ತು ನಾಲ್ವರು ಮಾಜಿ ಮುಖ್ಯಮಂತ್ರಿಗಳನ್ನು ಮಾತುಕತೆಗೆ ಆಹ್ವಾನಿಸಿರುವ ಹಿನ್ನೆಲೆ ಚಿದಂಬರಂ ಈ ಕುರಿತು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಕೊರೊನಾದಿಂದ ಮೃತಪಟ್ಟವರ ಕುಟುಂಬಗಳಿಗೆ ಪರಿಹಾರ ನಿರಾಕರಣೆ: ಕೇಂದ್ರದ ವಿರುದ್ಧ ರಾಗಾ ಕಿಡಿ
ಜಮ್ಮುಕಾಶ್ಮೀರವು ರಿಯಲ್ಎಸ್ಟೇಟ್ನ ಒಂದು ಭಾಗವಲ್ಲ. ಅಲ್ಲಿ ಜನತೆ ವಾಸಿಸುತ್ತಿದ್ದು, ಅವರ ಹಕ್ಕುಗಳ ಮತ್ತು ಆಶಯಗಳನ್ನು ಗೌರವಿಸಬೇಕು ಎಂದಿದ್ದಾರೆ.