ಲಖನೌ(ಉತ್ತರ ಪ್ರದೇಶ):ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ಉತ್ತರ ಪ್ರದೇಶದ ಲಖಿಂಪುರ್ದಲ್ಲಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಹಿಂಸಾಚಾರ ಉಂಟಾಗಿ ರೈತರು ಸೇರಿದಂತೆ ಅನೇಕರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಇದೀಗ ಮೃತ ರೈತರ ಕುಟುಂಬಸ್ಥರಿಗೆ ಛತ್ತೀಸ್ಗಢ ಹಾಗೂ ಪಂಜಾಬ್ ಸರ್ಕಾರ ಪರಿಹಾರ ಘೋಷಣೆ ಮಾಡಿವೆ.
ಛತ್ತೀಸ್ಗಢ ಹಾಗೂ ಪಂಜಾಬ್ ಸರ್ಕಾರ ಈ ನಿರ್ಧಾರ ಕೈಗೊಂಡಿದ್ದು, ಹಿಂಸಾಚಾರದ ವೇಳೆ ಸಾವಿಗೀಡಾಗಿರುವ ನಾಲ್ವರು ರೈತರು ಹಾಗೂ ಓರ್ವ ಪತ್ರಕರ್ತನ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಣೆ ಮಾಡಿವೆ.
ಲಖಿಂಪುರ್ ಖೇರಿಯ ಹಿಂಸಾಚಾರ:ಉತ್ತರಪ್ರದೇಶದ ಲಖಿಂಪುರ್ ಖೇರಿಯಲ್ಲಿ ನೂತನ ಕೃಷಿ ಕಾಯ್ಧೆಗಳ ವಿರುದ್ಧ ರೈತರು ಪ್ರತಿಭಟಿಸುತ್ತಿದ್ದರು. ಅಲ್ಲಿಗೆ ಕೇಂದ್ರ ಗೃಹಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಮತ್ತು ಉತ್ತರಪ್ರದೇಶ ಉಪ ಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಭೇಟಿ ನೀಡಿದ್ದನ್ನ ವಿರೋಧಿಸಿ ರೈತರು ಲಖಿಂಪುರ್ದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು. ಅಲ್ಲದೇ, ರೈತರು ಉಪ ಮುಖ್ಯಮಂತ್ರಿಗೆ ಕಪ್ಪು ಬಾವುಟಗಳನ್ನು ತೋರಿಸಲು ಯೋಜಿಸಿದ್ದರು.
ರೈತರು ಪ್ರತಿಭಟನೆ ನಡೆಸುತ್ತಿದ್ದಾಗ ಎರಡು ಕಾರುಗಳು ಅವರ ಮೇಲೆ ಹರಿದು, ಕೆಲ ರೈತರು ಮೃತಪಟ್ಟಿದ್ದರು. ಈ ವೇಳೆ, ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಒಂದು ಕಾರಿನಲ್ಲಿದ್ದರು ಎಂದು ಆರೋಪಿಸಲಾಗಿದೆ. ಪರಿಣಾಮ ಹೋರಾಟಗಾರರು ಬಿಜೆಪಿ ಕಾರ್ಯಕರ್ತರ ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿ ವಾಹನಗಳನ್ನು ಉರುಳಿಸಿದರು. ಈ ವೇಳೆ, ನಾಲ್ವರು ರೈತರು ಸೇರಿದಂತೆ ಒಟ್ಟು 8 ಮಂದಿ ಮೃತಪಟ್ಟಿದ್ದರು.