ಕೊರ್ಬಾ, ಛತ್ತೀಸ್‌ಗಢ:ಜಿಲ್ಲೆಯಲ್ಲಿ ಅಮಾನವೀಯ ಘಟನೆಯೊಂದು ಮುನ್ನೆಲೆಗೆ ಬಂದಿದೆ. ಸುಪಾರಿ ಕೊಟ್ಟು ಪತಿಯನ್ನು ಪತ್ನಿ ಕೊಲೆ ಮಾಡಿಸಿದ್ದಾರೆ. ಮದುವೆಯ ದಿನವೇ ಈ ದಾರುಣ ಘಟನೆ ನಡೆದಿದ್ದು, ಬಳಿಕ ಪೊಲೀಸರ ಮುಂದೆ ಸುಳ್ಳು ಕಥೆಗಳನ್ನು ಪತ್ನಿ ಹೆಣೆದಿದ್ದಾಳೆ. ಪ್ರಕರಣದ ದಾರಿ ತಪ್ಪಿಸುವ ಪ್ರಯತ್ನ ಮಾಡಿದ್ರೂ ಸಹ ಆರೋಪಿಗಳು ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದರು. ಮೂಲ ಆರೋಪಿ ಪತಿಯನ್ನು ಕೊಂದಿದ್ದು ಏಕೆ? ಗಂಡನನ್ನು ಕೊಲ್ಲಲು ಕೊಟ್ಟ ಸುಪಾರಿ ಎಷ್ಟು? ಏನಿದು ಗಂಡ-ಹೆಂಡ್ತಿ ಮಿಸ್ಟರಿ?
ಕೋರ್ಬಾದ ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ (SECL) ಕಂಪನಿಯಲ್ಲಿ ಉದ್ಯೋಗಿ ಜಗಜೀವನ್ ರಾಮ್ ಕೆಲಸ ಮಾಡುತ್ತಿದ್ದನು. 2013ರಲ್ಲಿ ಧನೇಶ್ವರಿ ಎಂಬ ಮಹಿಳೆಯನ್ನು ಮದುವೆಯಾಗಿದ್ದರು. ಜಗಜೀವನ್ ರಾಮ್ ಮತ್ತು ಧನೇಶ್ವರಿಗೆ ಇಬ್ಬರು ಮಕ್ಕಳಿದ್ದಾರೆ. ಜಗಜೀವನ್ ರಾಮ್ ಕುಡಿದು ಮನೆಗೆ ಬರುತ್ತಿದ್ದರಿಂದ ದಂಪತಿ ನಡುವೆ ಆಗಾಗ ಜಗಳ ಶುರುವಾಗುತ್ತಿತ್ತು. ಈ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಹೇಗಾದರೂ ಮಾಡಿ ಗಂಡನನ್ನು ದೂರ ಮಾಡಬೇಕೆಂದು ಧನೇಶ್ವರಿ ಪ್ಲಾನ್ ಮಾಡಿದರು. ಇದರ ಭಾಗವಾಗಿ ಆಕೆ ಮಾರ್ಚ್ 2023 ರಲ್ಲಿ ತುಷಾರ್ ಸೋನಿ ಅಲಿಯಾಸ್ ಗೋಪಿಯನ್ನು ಸಂಪರ್ಕಿಸಿದರು. ಗಂಡನನ್ನು ಕೊಲ್ಲಲು ಆತನೊಂದಿಗೆ ಧನೇಶ್ವರಿ ಒಪ್ಪಂದ ಮಾಡಿಕೊಂಡಳು. ಮುಂಗಡವಾಗಿ 50 ಸಾವಿರ ರೂಪಾಯಿ ನಗದು ಕೂಡ ನೀಡಿದ್ದಳು.
ಈ ಕ್ರಮದಲ್ಲಿ ಮೇ 23ರ ರಾತ್ರಿ ತುಷಾರ್ ಸೋನಿ ಜಗಜೀವನ್ ರಾಮ್ ಮನೆಗೆ ಹೋಗಿದ್ದರು. ಜಗಜೀವನ್ ರಾಮ್ ಬಾಗಿಲು ತೆರೆದಾಗ ಸೋನಿ ನೀರು ಕೇಳಿದರು. ತಕ್ಷಣ ಸೋನಿ ಜಗಜೀವನ್ ರಾಮ್ ಮೇಲೆ ತನ್ನೊಂದಿಗೆ ತಂದಿದ್ದ ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದನು. ಪರಿಣಾಮ ಜಗಜೀವನ್ ರಾಮ್ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕೊಲೆ ಮಾಡಿದ ಬಳಿಕ ಧನೇಶ್ವರಿ ತನ್ನ ಮೊಬೈಲ್ ಒಡೆದಿದ್ದಾರೆ. ಫೋನ್ ಅನ್ನು ಹೊರಗೆ ಎಸೆಯಲು ಧನೇಶ್ವರಿ ಸೋನಿಗೆ ಹೇಳಿದ್ದಾರೆ. ಮೇಲಾಗಿ ಕೊಲೆ ಆರೋಪಿಗೆ ಧನೇಶ್ವರಿ 6 ಸಾವಿರ ರೂಪಾಯಿ ನಗದು ಹಾಗೂ ಚಿನ್ನದ ನೆಕ್ಲೇಸ್ ನೀಡಿದ್ದಾಳೆ. ಬಳಿಕ ಆರೋಪಿ ಸೋನಿ ಅಲ್ಲಿಂದ ಪರಾರಿಯಾಗಿದ್ದಾನೆ.