ಕೊರ್ಬಾ (ಛತ್ತೀಸ್‌ಗಢ):ಛತ್ತೀಸ್‌ಗಢದ ಕೊರ್ಬಾ ಜಿಲ್ಲೆಯ ಕೃಷಿ ಭೂಮಿಯಲ್ಲಿ ಧೈರ್ಯಶಾಲಿ ತಾಯಿಯೊಬ್ಬಳು ತನ್ನ 11 ವರ್ಷದ ಮಗಳನ್ನು ರಕ್ಷಿಸಲು ಕಾಡುಹಂದಿಯೊಂದಿಗೆ ಹೋರಾಡಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಮಾಹಿತಿ ನೀಡಿದ್ದಾರೆ. ಕಾಡು ಹಂದಿಯು ಬಾಲಕಿ ಮೇಲೆ ದಾಳಿ ಮಾಡಲು ಮುಂದಾಗಿದೆ. ತಕ್ಷಣವೇ ಅಡ್ಡ ಬಂದು ನಿಂತ ಮಹಿಳೆಯು ಪುತ್ರಿಗೆ ಒಂದಿಷ್ಟೂ ಗಾಯವಾದಂತೆ ತಡೆದಿದ್ದಾಳೆ. ಪ್ರಾಣಿಯೊಂದಿಗೆ ಮುಖಾಮುಖಿ ಸಂಘರ್ಷದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಅಧಿಕಾರಿ ಹೇಳಿದರು.
ಜಮೀನಿಗೆ ಹೋಗಿದ್ದ ತಾಯಿ-ಮಗಳು:ಪಸನ್ ಪೊಲೀಸ್ ಠಾಣಾ ವ್ಯಾಪ್ತಿಯ ತೆಲಿಯಮಾರ್ ಗ್ರಾಮದಲ್ಲಿ ಭಾನುವಾರ ಈ ಘಟನೆ ನಡೆಯಿತು. ಮಹಿಳೆ ದುವಾಶಿಯಾ ಬಾಯಿ (45) ಮತ್ತು ಆಕೆಯ ಮಗಳು ರಿಂಕಿ ಮಣ್ಣು ತರಲು ಸಮೀಪದ ಜಮೀನಿಗೆ ತೆರಳಿದ್ದರು ಎಂದು ಪಸನ್ ಅರಣ್ಯ ವಲಯ ಅಧಿಕಾರಿ ರಾಮನಿವಾಸ್ ದಹಾಯತ್ ತಿಳಿಸಿದ್ದಾರೆ.
ಕಾಡುಹಂದಿ ಕೊಂದು ತಾನೂ ಸಾವನ್ನಪ್ಪಿದಳು:ಪ್ರಾಥಮಿಕ ಮಾಹಿತಿಯ ಪ್ರಕಾರ, ಮಹಿಳೆ ಕೊಡಲಿಯಿಂದ ಮಣ್ಣು ಅಗೆಯುವ ಕೆಲಸದಲ್ಲಿ ನಿರತರಾಗಿದ್ದಾಗ, ಕಾಡುಹಂದಿ ಇದ್ದಕ್ಕಿದ್ದಂತೆ ಅಲ್ಲಿಗೆ ಬಂದು ಮಗಳತ್ತ ನುಗ್ಗಿದೆ. ದುವಾಶಿಯಾ ತನ್ನ ಮಗುವನ್ನು ಉಳಿಸುವ ಭಗೀರಥ ಪ್ರಯತ್ನದಲ್ಲಿ ಕೊಡಲಿಯೊಂದಿಗೆ ಪ್ರಾಣಿಯನ್ನು ಎದುರಿಸಿದ್ದಾಳೆ ಎಂದು ಅಧಿಕಾರಿ ತಿಳಿಸಿದರು. ಈ ಹೋರಾಟದಲ್ಲಿ ಮಹಿಳೆ ಕಾಡುಹಂದಿಯನ್ನು ಕೊಲ್ಲುವಲ್ಲಿ ಯಶಸ್ವಿಯಾದರು. ಆದರೆ, ಆಕೆಗೆ ಗಂಭೀರವಾದ ಗಾಯಗಳಾಗಿದ್ದು ಸ್ಥಳದಲ್ಲೇ ಮೃತಪಟ್ಟರು. ಬಾಲಕಿಗೆ ಯಾವುದೇ ಗಾಯವಾಗಿಲ್ಲ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
5.75 ಲಕ್ಷ ರೂಪಾಯಿ ಪರಿಹಾರ:ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ, ಮಹಿಳೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಕಾಡುಪ್ರಾಣಿಗಳ ದಾಳಿ ಪ್ರಕರಣಗಳಲ್ಲಿ ನೀಡಲಾಗುವ ಪರಿಹಾರದ ಭಾಗವಾಗಿ ಮೃತರ ಕುಟುಂಬಕ್ಕೆ 25,000 ರೂ.ಗಳ ತ್ವರಿತ ಪರಿಹಾರ ಒದಗಿಸಲಾಗಿದೆ. ಅಗತ್ಯ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ ಉಳಿದ 5.75 ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ಅರಣ್ಯ ಅಧಿಕಾರಿಗಳು ಹೇಳಿದರು.
ಇದನ್ನೂ ಓದಿ:ವಾಟರ್ ಹೀಟರ್ನಿಂದ ವಿದ್ಯುತ್ ಪ್ರವಹಿಸಿ ತಾಯಿ, ಮಗು ಸಾವು