ರಾಯ್‌ಪುರ (ಛತ್ತೀಸ್‌ಗಢ) : ಡ್ರಗ್ಸ್ ವಿರುದ್ಧದ ಕಾರ್ಯಾಚರಣೆಯಲ್ಲಿ ರಾಯ್‌ಪುರ ಪೊಲೀಸರು ಆರು ಜನರನ್ನು ಬಂಧಿಸಿ, 1 ಕೋಟಿಗೂ ಅಧಿಕ ಮೌಲ್ಯದ ಮಾದಕವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ರಾಯ್‌ಪುರ ಎಸ್‌ಎಸ್‌ಪಿ ಪ್ರಶಾಂತ್ ಅಗರ್‌ವಾಲ್, ಎಎಸ್‌ಪಿ ಅಭಿಷೇಕ್ ಮತ್ತು ಡಿಸಿ ಪಟೇಲ್ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿದೆ.
ಇಲ್ಲಿನ ಆಜಾದ್ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯ ಮುಕುತ್ ನಗರದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ಯುವಕರು ಮಾದಕ ದ್ರವ್ಯ ಮಾತ್ರೆಗಳನ್ನು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಲಭಿಸಿತ್ತು. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಬೈಕ್ ಸವಾರರಾದ ಕಿಯಾಜುದ್ದೀನ್ ಮತ್ತು ಜೆ ಭಾಸ್ಕರ್ ಎಂಬವರನ್ನು ಬಂಧಿಸಿದ್ದಾರೆ. ಬಂಧಿತರಿಂದ 1.99 ಲಕ್ಷ ರೂಪಾಯಿ ಮೌಲ್ಯದ 20 ಅಲ್ಪ್ರಜೋಲಮ್ ಮತ್ತು 140 ಸ್ಪಾಸ್ಮೋ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈ ಇಬ್ಬರ ಆರೋಪಿಗಳ ವಿಚಾರಣೆ ವೇಳೆ ಸಿಕ್ಕ ಮಾಹಿತಿಯ ಮೇರೆಗೆ ಮೂರನೇ ಆರೋಪಿ ರವೀಂದ್ರ ಗೋಯಲ್‌ನನ್ನು ಪೊಲೀಸರು ಹಳೆ ಬಸ್ತಿ ಪ್ರದೇಶದಲ್ಲಿ ಬಂಧಿಸಿದ್ದಾರೆ. ಈತನಿಂದ ಸುಮಾರು 14,000 ಸ್ಪಾಸ್ಮೋ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿ ರವೀಂದ್ರ ತನ್ನ ಕಾರಿನಲ್ಲಿ ಮಾದಕ ಮಾತ್ರೆಗಳನ್ನು ಸರಬರಾಜು ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.