ಕಂಕೇರ್ (ಛತ್ತೀಸ್‌ಗಢ):ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆ ಪೈಕಿ ಇಂದು ಛತ್ತೀಸ್ಗಢದ 20 ಕ್ಷೇತ್ರಗಳು ಹಾಗೂ ಮಿಜೋರಾಂನ ಎಲ್ಲ 40 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ. ಛತ್ತೀಸ್ಗಢದ ನಕ್ಸಲ್ ಪೀಡಿತ ಪ್ರದೇಶದ ಕೆಲ ಅಹಿತಕರ ಘಟನೆಗಳ ನಡುವೆಯೂ ಮತದಾರರು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ. ಕೆಲವು ಗ್ರಾಮದಲ್ಲಿ ಇದೇ ಮೊದಲ ಬಾರಿಗೆ ಮತಗಟ್ಟೆ ಸ್ಥಾಪಿಸಿರುವುದು ವಿಶೇಷವಾಗಿದ್ದರೆ, 93 ವರ್ಷದ ವಯೋವೃದ್ಧರೊಬ್ಬರು ತಮ್ಮ ಜೀವನದಲ್ಲಿ ಇದೇ ಮೊದಲ ಬಾರಿಗೆ ಮತ ಚಲಾಯಿಸಿ ಗಮನ ಸೆಳೆದಿದ್ದಾರೆ.
ಛತ್ತೀಸ್‌ಗಢದಲ್ಲಿ ಐಇಡಿ ಸ್ಫೋಟ: 90 ಸದಸ್ಯ ಬಲದ ಛತ್ತೀಸ್‌ಗಢದಲ್ಲಿ ಎರಡು ಹಂತಗಳ ಮತದಾನ ನಿಗದಿಯಾಗಿದೆ. ಇಂದು ಮೊದಲ ಹಂತದಲ್ಲಿ 20 ಕ್ಷೇತ್ರದಲ್ಲಿ ಮತದಾನ ಜರುಗುತ್ತಿದೆ. ಇದರಲ್ಲಿ ನಕ್ಸಲ್ ಪೀಡಿತ ಬಸ್ತಾರ್ ವಿಭಾಗದಲ್ಲಿ 12 ಕ್ಷೇತ್ರಗಳು ಸೇರಿದ್ದು, ಪೊಲೀಸರು, ಸಿಆರ್‌ಪಿಎಫ್ ಸೇರಿದಂತೆ ಭದ್ರತಾ ಪಡೆಗಳು ಹದ್ದಿನ ಕಣ್ಣು ಇರಿಸಿವೆ. ಇದರ ನಡುವೆ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲೀಯರು ಐಇಡಿ ಸ್ಫೋಟಿಸಿದ್ದಾರೆ. ಇದರಲ್ಲಿ ಸಿಆರ್‌ಪಿಎಫ್‌ನ ಕೋಬ್ರಾ ಕಮಾಂಡೋ, ಇನ್ಸ್‌ಪೆಕ್ಟರ್ ಶ್ರೀಕಾಂತ್ ಎಂಬುವರು ಗಾಯಗೊಂಡಿದ್ದಾರೆ.
ಇದನ್ನೂ ಓದಿ:ರಾಜಸ್ಥಾನ ಚುನಾವಣೆ: 32 ಚುನಾವಣೆಗಳಲ್ಲಿ ಸ್ಪರ್ಧೆ, 33ನೇ ಬಾರಿಗೆ ಅಖಾಡಕ್ಕಿಳಿದ ಹಠವಾದಿ
ಇಂದು ಬೆಳಗ್ಗೆ ಸಿಆರ್‌ಪಿಎಫ್ ಮತ್ತು 206ನೇ ಬೆಟಾಲಿಯನ್ ಕೋಬ್ರಾ ಸಿಬ್ಬಂದಿಯ ಜಂಟಿ ಪಡೆಯ ತೊಂಡಮಾರ್ಕ ಕ್ಯಾಂಪ್‌ನಿಂದ ಎಲ್ಮಗುಂದ ಗ್ರಾಮದ ಕಡೆಗೆ ಹೊರಟಿತ್ತು. ಇದೇ ವೇಳೆ ಕೋಬ್ರಾ ಇನ್ಸ್‌ಪೆಕ್ಟರ್ ಶ್ರೀಕಾಂತ್ ನಕ್ಸಲರು ಅಡಗಿಸಿಟ್ಟಿದ್ದ ಐಇಡಿ ಮೇಲೆ ಕಾಲಿಟ್ಟಿದ್ದಾರೆ. ಇದರಿಂದ ಅದು ಸ್ಫೋಟಗೊಂಡಿದ್ದರಿಂದ ಅವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಸೋಮವಾರ ಕೂಡ ನಾರಾಯಪುರದಲ್ಲಿ ನಕ್ಸಲರು ಐಇಡಿ ಸ್ಥಾಪಿಸಲು ಯೋಜಿಸಿದ್ದರು. ಆದರೆ, ಐಟಿಬಿಪಿ ತಂಡ ಸ್ಥಳಕ್ಕಾಗಮಿಸಿ ಐಇಡಿ ಬಾಂಬ್ ಪತ್ತೆ ಮಾಡಿತ್ತು. ಅದನ್ನು ನಿಷ್ಕ್ರಿಯಗೊಳಿಸುವಾಗ ಯೋಧಯೊಬ್ಬರಿಗೆ ಸಣ್ಣ-ಪುಟ್ಟ ಗಾಯಗಳು ಆಗಿದ್ದವು.
ಚಂದಮೇಟಾದಲ್ಲಿ ಪ್ರಥಮ ಬಾರಿಗೆ ಮತದಾನ:ಇದೇ ಬಸ್ತಾರ್ ವಿಭಾಗದ ಜಗದಲ್‌ಪುರ ಜಿಲ್ಲೆಯ ಚಂದಮೇಟಾ ಗ್ರಾಮದಲ್ಲಿ ಪ್ರಥಮ ಬಾರಿಗೆ ಮತದಾನ ನಡೆಯುತ್ತಿದೆ. ಛತ್ತೀಸ್‌ಗಢ ಮತ್ತು ಒಡಿಶಾದ ಗಡಿ ಪ್ರದೇಶದಲ್ಲಿರುವ ದರ್ಭಾ ಅಭಿವೃದ್ಧಿ ಬ್ಲಾಕ್‌ನ ಈ ಗ್ರಾಮವು ನಕ್ಸಲ್ ಪೀಡಿತ ಪ್ರದೇಶವಾಗಿದೆ. ಈ ಹಿಂದೆ ಈ ಪ್ರದೇಶದಲ್ಲಿ ನಕ್ಸಲರ ಉಪಟಳ ಸದಾ ಇರುತ್ತಿತ್ತು. ಇದೇ ಗ್ರಾಮದಲ್ಲಿ ನಕ್ಸಲೀಯರು ತಮ್ಮ ತರಬೇತಿ ಶಿಬಿರಗಳನ್ನು ನಡೆಸುತ್ತಿದ್ದರು.