ಕಂಕೇರ್ (ಛತ್ತೀಸ್‌ಗಢ):ಕುಡಿದ ಅಮಲಿನಲ್ಲಿ ಪತ್ನಿಯೊಬ್ಬಳು ಕೊಡಲಿಯಿಂದ ಹೊಡೆದು ಪತಿಯನ್ನೇ ಕೊಂದಿರುವ ಘಟನೆ ಆಮಾಬೇಡಾ ಪೊಲೀಸ್ ಠಾಣಾ ವ್ಯಾಪ್ತಿಯ ರಾಯ ಗ್ರಾಮದಲ್ಲಿ ನಡೆದಿದೆ. ಪತಿಯನ್ನು ಗಂಭೀರವಾಗಿ ಗಾಯಗೊಳಿಸಿದ ಬಳಿಕ ಮನೆಯಲ್ಲಿಯೇ ಚಿಕಿತ್ಸೆ ಕೊಡಿಸುತ್ತಿದ್ದಳು. ಆದರೆ, ಘಟನೆ ನಡೆದು ನಾಲ್ಕು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೇ ಪತಿ ಸಾವನ್ನಪ್ಪಿದ್ದು, ಈ ಕುರಿತು ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದಾಗ ವಿಷಯ ಬೆಳಕಿಗೆ ಬಂದಿದೆ.
6 ದಿನಗಳ ಹಿಂದಷ್ಟೇ ಅಂದರೆ ಜುಲೈ 16 ರಂದು ಸಂಜೆ 5 ಗಂಟೆಗೆ ಈ ಘಟನೆ ನಡೆದಿದೆ. ರಾಯ ಗ್ರಾಮದ ನಿವಾಸಿ ಮಂಕಿ ಪರ್ಚಾಪಿ (30) ಮದ್ಯ ಸೇವಿಸಿ ಮನೆಯಲ್ಲೇ ಕುಳಿತಿದ್ದಳು. ಅಷ್ಟರಲ್ಲಿ ಕೆಲಸ ಮುಗಿಸಿ ಪತಿ ಸಾಗರಂ ಪರ್ಚಾಪಿ (35) ಮನೆಗೆ ಬಂದಿದ್ದಾನೆ. ಈ ವೇಳೆ ಕೌಟುಂಬಿಕ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ಜಗಳ ನಡೆದಿದೆ. ಏಕಾಏಕಿ ಕೋಪಗೊಂಡ ಮದ್ಯವ್ಯಸನಿ ಪತ್ನಿ, ಮನೆಯಲ್ಲಿಟ್ಟಿದ್ದ ಕೊಡಲಿಯಿಂದ ಗಂಡನ ತಲೆಗೆ ಬಲವಾಗಿ ಹೊಡೆದಿದ್ದಾಳೆ. ಒಂದೇ ಹೊಡೆತಕ್ಕೆ ಪತಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ತಲೆಗೆ ಗಂಭೀರ ಗಾಯವಾಗಿದ್ದು, ತೀವ್ರ ರಕ್ತಸ್ರಾವವಾಗಿದೆ.
ಇದನ್ನೂ ಓದಿ :ಪತಿಯನ್ನು ಪ್ರಿಯಕರನಿಂದ ಕೊಲ್ಲಿಸಿ ಮಿಸ್ಸಿಂಗ್ ಕೇಸು ದಾಖಲಿಸಿದ ಪತ್ನಿ, ಇಬ್ಬರ ಬಂಧನ
ಹಲ್ಲೆ ಬಳಿಕ ಚಿಕಿತ್ಸೆ:ಹಲ್ಲೆ ಬಳಿಕ ಮಹಿಳೆಯು ಪತಿಯ ತಲೆಗೆ ಬ್ಯಾಂಡೇಜ್ ಹಾಕಿ ಹಾಸಿಗೆಯಲ್ಲಿ ಮಲಗಿಸಿದ್ದಾಳೆ. ಇದಾದ ನಂತರ, ಗಿಡಮೂಲಿಕೆ ಚಿಕಿತ್ಸೆ ನೀಡುವವರನ್ನು ಸಂಪರ್ಕಿಸಿದ್ದಾಳೆ. ಗಂಡನ ತಲೆಯ ಗಾಯದ ಬಗ್ಗೆ ಮಾಹಿತಿ ನೀಡಿ ಔಷಧಿ ಪಡೆದು ಗಿಡಮೂಲಿಕೆ ಚಿಕಿತ್ಸೆ ನೀಡಲು ಪ್ರಾರಂಭಿಸಿದ್ದಾಳೆ. ಆದರೆ ಘಟನೆ ನಡೆದ ನಾಲ್ಕನೇ ದಿನ ಜುಲೈ 19 ರ ರಾತ್ರಿ ಸಾಗರಂ ಮೃತಪಟ್ಟಿದ್ದಾನೆ. ಬಳಿಕ ಪೊಲೀಸರ ಮೊರೆ ಹೋಗದ ಹೆಂಡತಿ ಗುಪ್ತವಾಗಿ ಗಂಡನ ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದಾಳೆ. ಈ ಕುರಿತು ಗ್ರಾಮದ ಮುಖ್ಯಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಬಳಿಕ ಸ್ಥಳಕ್ಕಾಗಮಿಸಿದ ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮಹಿಳೆಯನ್ನು ಆಮಾಬೇಡಾ ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ಪತಿಯನ್ನು ತಾನೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ :ಶಿವಮೊಗ್ಗ: ಕೇಬಲ್ನಿಂದ ಉಸಿರುಗಟ್ಟಿಸಿ ಪತ್ನಿ ಕೊಂದ ಪತಿಗೆ ಜೀವಾವಧಿ ಶಿಕ್ಷೆ
ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಹಿಳೆ ತನ್ನ ಪತಿಯನ್ನು ಕೊಂದಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಜಗಳಕ್ಕೆ ಕಾರಣವೇನು ಎಂಬ ಅಂಶ ತಿಳಿದು ಬಂದಿಲ್ಲ. ಸಿಕ್ಕಿರುವ ಮಾಹಿತಿ ಪ್ರಕಾರ, ಮಂಕಿ ಪರ್ಚಾಪಿ ಮದ್ಯವ್ಯಸನಿಯಾಗಿದ್ದು, ಇದರಿಂದ ಪ್ರತಿದಿನ ಗಂಡ ಹೆಂಡತಿ ನಡುವೆ ಜಗಳ ನಡೆಯುತ್ತಿತ್ತು. ಈ ದಂಪತಿಗೆ ಒಟ್ಟು ಐವರು ಮಕ್ಕಳಿದ್ದಾರೆ. ಇದರಲ್ಲಿ ಐದನೇ ಮಗುವಿಗೆ ಒಂದೂವರೆ ವರ್ಷ ವಯಸ್ಸಾಗಿದೆ. ಪ್ರಸ್ತುತ ಈಕೆ ಮತ್ತೆ ಗರ್ಭಿಣಿಯಾಗಿದ್ದಾಳೆ.
ಇದನ್ನೂ ಓದಿ :ಬೊಮ್ಮಸಂದ್ರ ಪುರಸಭಾ ಉಪಾಧ್ಯಕ್ಷನ ಮಗನ ಕೊಲೆಗೆ ಯತ್ನ: ಗೆಳೆಯನ ಸ್ಥಿತಿ ಗಂಭೀರ