ಕರ್ನಾಟಕ

karnataka

ETV Bharat / bharat

ಅನುಮಾನದ ಭೂತ: ಹೊಸ ವರ್ಷದ ಮೊದಲ ದಿನವೇ ಪತ್ನಿ, ಮೂವರು ಮಕ್ಕಳನ್ನು ಕೊಲೆಗೈದ ಪಾಪಿ - Husband kills wife

Chhattisgarh Man Kills Family: ತನ್ನ ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದ ಹಿನ್ನೆಲೆಯಲ್ಲಿ ಪತಿಯೊಬ್ಬ ಮೂವರು ಮಕ್ಕಳು ಸೇರಿದಂತೆ ನಾಲ್ವರನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಛತ್ತೀಸ್‌ಗಢದಲ್ಲಿ ನಡೆದಿದೆ.

ಉಮೇಂದ್ರ ಕೇವತ್ (31)
ಉಮೇಂದ್ರ ಕೇವತ್ (31)

By ETV Bharat Karnataka Team

Published : Jan 2, 2024, 7:19 PM IST

ಛತ್ತೀಸ್‌ಗಢ (ಬಿಲಾಸ್​ಪುರ): ಕ್ಷುಲ್ಲಕ ಕಾರಣಕ್ಕೆ ಕ್ರೂರಿ ಪತಿಯೊಬ್ಬ ಪತ್ನಿ ಸೇರಿದಂತೆ ತನ್ನ ಮೂವರು ಮುದ್ದಾದ ಮಕ್ಕಳನ್ನು ಭೀಕರವಾಗಿ ಕೊಲೆ ಮಾಡಿರುವ ಘಟನೆ ಛತ್ತೀಸ್‌ಗಢದ ಬಿಲಾಸ್​ಪುರ ಜಿಲ್ಲೆಯ ಮಸ್ತೂರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪತ್ನಿ ಮತ್ತು ಮಕ್ಕಳಾದ ಖುಷಿ ಕೇವತ್ (8), ನಿಶಾ ಕೇವತ್ (4), ಪವನ್ ಕೇವತ್ (3) ಕೊಲೆಗೀಡಾದವರು. ಉಮೇಂದ್ರ ಕೇವತ್ (31) ಕೊಲೆ ಮಾಡಿದ ವ್ಯಕ್ತಿ. ಹೊಸ ವರ್ಷದ ಮೊದಲ ದಿನವೇ ಆರೋಪಿ ಉಮೇಂದ್ರ ಕುಟುಂಬದ ನಾಲ್ವರನ್ನೂ ಭೀಕರವಾಗಿ ಕೊಲೆ ಮಾಡಿದ್ದಾನೆ ಎಂದು ಮಸ್ತೂರಿ ಪೊಲೀಸ್​ ಠಾಣೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

''ಪತ್ನಿ ವಿವಾಹೇತರ ಸಂಬಂಧ ಹೊಂದಿದ್ದಳು ಎಂಬ ಅನುಮಾನದ ಹಿನ್ನೆಲೆ ಈ ಕೃತ್ಯ ಎಸಗಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈ ಅನುಮಾನದ ಹಿನ್ನೆಲೆ ಆರೋಪಿಯು ದಿನವೂ ಪತ್ನಿಯ ಮೇಲೆ ಹಲ್ಲೆ ನಡೆಸುತ್ತಿದ್ದ ಎಂಬ ಬಗ್ಗೆಯೂ ಮಾಹಿತಿ ಇದೆ. ಮೇಲ್ನೋಟಕ್ಕೆ ಕೊಲೆಗೆ ಇದೇ ಕಾರಣ ಎಂಬ ಶಂಕೆ ಇದೆ. ಇಬ್ಬರು ಹುಡುಗಿಯರು ಮತ್ತು ಒಬ್ಬ ಹುಡುಗ ಸೇರಿ ದಂಪತಿಗೆ ಮೂವರು ಮಕ್ಕಳಿದ್ದರು. ರಾತ್ರಿ ಮೂರು ಗಂಟೆ ಸುಮಾರಿಗೆ ಈ ಕೊಲೆಗಳು ನಡೆದಿರುವ ಸಾಧ್ಯತೆ ಇದೆ. ಹೊಸ ವರ್ಷದ ಮೊದಲ ದಿನವನ್ನು ಮನೆಯಲ್ಲಿ ಎಲ್ಲರೂ ಸೇರಿ ಆಚರಿಸಿದ್ದರು. ಆರೋಪಿಯ ತಂದೆ-ತಾಯಿಯ ವಿವಾಹ ವಾರ್ಷಿಕೋತ್ಸವ ಹಾಗೂ ಹೊಸ ವರ್ಷವೂ ಇದ್ದುದರಿಂದ ಕೇಕ್ ಸಹ ಕತ್ತರಿಸಿದ್ದಾರೆ. ಎಲ್ಲರೂ ಒಟ್ಟಿಗೆ ಊಟ ಮಾಡಿ ಮಲಗಿದ್ದರು. ಈ ವೇಳೆ ಆರೋಪಿ ಉಮೇಂದ್ರ ತಡರಾತ್ರಿ ಕೊಲೆ ಎಸಗಿದ್ದು, ಬಳಿಕ ತಾನು ಸ್ಥಳೀಯ ಪೊಲೀಸ್​​ ಠಾಣೆಗೆ ಬಂದು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆತನ ಹೇಳಿಕೆ ಬಳಿಕ ಘಟನಾ ಸ್ಥಳಕ್ಕೆ ತೆರಳಿ ಪರಿಶೀಲನೆ ಸಹ ನಡೆಸಲಾಗಿದೆ'' ಎಂದು ಪೊಲೀಸರು ತಿಳಿಸಿದ್ದಾರೆ.

''ಹೊಸ ವರ್ಷದ ಆಚರಣೆ ಬಳಿಕ ರಾತ್ರಿ ಊಟ ಮಾಡಿ ಎಲ್ಲರೂ ಮಲಗಲು ತೆರಳಿದೆವು. ಪೊಲೀಸರು ಬಂದಾಗಲೇ ನಮಗೆ ಈ ವಿಷಯ ತಿಳಿಯಿತು. ಆದರೆ, ಜಗಳ ಇರಲಿಲ್ಲ'' ಎಂದು ಆರೋಪಿಯ ತಾಯಿ ಹೇಳಿದರೆ, ''ಹೊಸ ವರ್ಷದ ಜೊತೆಗೆ ಅಜ್ಜ-ಅಜ್ಜಿಯ ವಿವಾಹ ವಾರ್ಷಿಕೋತ್ಸವವೂ ಇತ್ತು. ಎಲ್ಲರೂ ಸೇರಿ ಆಚರಿಸಿದೆವು. ಊಟದ ಬಳಿಕ ಮಲಗಲು ತೆರಳಿದೆವು. ಪೊಲೀಸರು ಉಮೇಂದ್ರನನ್ನು ಕರೆದುಕೊಂಡು ಬಂದು ಪರಿಶೀಲಿಸುತ್ತಿದ್ದಾಗಲೇ ಈ ಘಟನೆ ನಡೆದಿರುವುದು ನಮಗೆ ಗೊತ್ತಾಯಿತು'' ಎಂದು ಆರೋಪಿಯ ಸಂಬಂಧಿಯೊಬ್ಬರು ಘಟನೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ನಾಲ್ವರ ಕೊಲೆ ಪ್ರಕರಣ ಸ್ಥಳೀಯರನ್ನು ಬೆಚ್ಚಿ ಬೀಳಿಸಿದೆ.

''ಕುಟುಂಬ ದುಡಿಯಲು ಜಾರ್ಖಂಡ್‌ಗೆ ತೆರಳಿತ್ತು. ಡಿಸೆಂಬರ್ 31 ರಂದು ಗ್ರಾಮಕ್ಕೆ ಮರಳಿತ್ತು. ಪತ್ನಿಯ ಮೇಲಿನ ಅನುಮಾನ ಹಿನ್ನೆಲೆ ಈ ಕೊಲೆ ಮಾಡಿರುವ ಸಾಧ್ಯತೆ ಇದೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ. ಮುಂದಿನ ತನಿಖೆ ನಡೆಸಲಾಗುತ್ತಿದೆ'' ಎಂದು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಅರ್ಚನಾ ಝಾ ತಿಳಿಸಿದ್ದಾರೆ.

ಇದನ್ನೂ ಓದಿ: ಪತಿಯಿಂದ ಪತ್ನಿಯ ಹತ್ಯೆ, ಮಗುವಿನ ಮೇಲೆ ಮಾರಣಾಂತಿಕ ಹಲ್ಲೆ: ಕೊಲೆ ಆರೋಪಿ ಆತ್ಮಹತ್ಯೆಗೆ ಶರಣು

ABOUT THE AUTHOR

...view details