ರಾಯಪುರ(ಛತ್ತೀಸ್ಗಢ): ಹಣ ಎಂದರೆ ಹೆಣ ಬಾಯ್ತೆರೆಯುತ್ತೆ ಅಂತಾರೆ. ಅಂತಹದ್ದರಲ್ಲಿ ಈ ಟ್ರಾಫಿಕ್ ಪೊಲೀಸ್ ಮಾತ್ರ ಪೂರ್ತಿ ಉಲ್ಟಾ. ತನಗೆ ರಸ್ತೆಯಲ್ಲಿ ಸಿಕ್ಕ ಹಣದ ಕಂತೆಗಳನ್ನು ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ಅದೂ ಎರಡೋ ಮೂರೋ ಸಾವಿರವಲ್ಲ, ಬರೋಬ್ಬರಿ ₹45 ಲಕ್ಷ.
ಛತ್ತೀಸ್ಗಢದ ರಾಜಧಾನಿ ರಾಯ್ಪುರದ ಕಯಾಬಂಧ ಪೊಲೀಸ್ ಠಾಣೆಯ ಟ್ರಾಫಿಕ್ ಕಾನ್ಸ್ಟೇಬಲ್ ನಿಲಂಬರ್ ಸಿನ್ಹಾ ಆ ಪ್ರಾಮಾಣಿಕ ಪೊಲೀಸ್. ತಾವು ಕೆಲಸ ಮಾಡುತ್ತಿದ್ದ ವ್ಯಾಪ್ತಿಯಲ್ಲಿ ರಸ್ತೆಯ ಮೇಲೆ ಬ್ಯಾಗ್ವೊಂದು ಬಿದ್ದಿರುವುದನ್ನು ಕಂಡಿದ್ದಾರೆ. ಅದನ್ನು ತೆರೆದು ಪರಿಶೀಲಿಸಿದಾಗ ಅದರಲ್ಲಿ 2 ಸಾವಿರ, 500 ರೂಪಾಯಿ ಮುಖಬೆಲೆಯ ನೋಟಿನ ಕಂತೆಗಳು ಇದ್ದವು.
ಬಳಿಕ ಹಣದ ಬ್ಯಾಗ್ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ಹತ್ತಿರದ ಪೊಲೀಸ್ ಠಾಣೆಗೆ ತಂದು ಒಪ್ಪಿಸಿದ್ದಾರೆ. ಠಾಣೆಯಲ್ಲಿ ಹಣವನ್ನು ಎಣಿಕೆ ಮಾಡಿದಾಗ ಅದರಲ್ಲಿ 45 ಲಕ್ಷ ರೂಪಾಯಿ ಇರುವುದು ಗೊತ್ತಾಗಿದೆ.
ಅನಾಮಧೇಯ ವ್ಯಕ್ತಿಯ ಭಾರೀ ಮೊತ್ತದ ಹಣ ಸಿಕ್ಕರೂ ಅದನ್ನು ಠಾಣೆಗೆ ತಂದು ಒಪ್ಪಿಸಿದ ಕಾನ್ಸ್ಟೇಬಲ್ರ ಪ್ರಾಮಾಣಿಕತೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಇದರಿಂದ ಸಂತುಷ್ಟರಾದ ಹಿರಿಯ ಅಧಿಕಾರಿಗಳು ನಿಲಂಬರ್ ಸಿನ್ಹಾಗೆ ಬಹುಮಾನವನ್ನು ಘೋಷಿಸಿದ್ದಾರೆ. ಅಲ್ಲದೇ, ಈ ಹಣ ಯಾರಿಗೆ ಸೇರಿದ್ದು ಮತ್ತು ಇದರ ಮೂಲದ ಬಗ್ಗೆ ತನಿಖೆಗೆ ಸೂಚಿಸಲಾಗಿದೆ.
ಇದನ್ನೂ ಓದಿ:ಅನ್ನಭಾಗ್ಯ ಅಕ್ಕಿ ಕಳ್ಳಸಾಗಾಟದ ಜಾಲ ಪತ್ತೆ: ರಾತ್ರೋ ರಾತ್ರಿ ಶೆಡ್ ಮೇಲೆ ಶಾಸಕ ಗಣೇಶ್ ದಾಳಿ