ಕರ್ನಾಟಕ

karnataka

ETV Bharat / bharat

ಚರ್ಮದ ಬಣ್ಣದ ಆಧಾರದ ಮೇಲೆ ಸಂಗಾತಿಯನ್ನು ಬಿಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ: ಹೈಕೋರ್ಟ್ - ಕಪ್ಪು ತ್ವಚೆ

ಚರ್ಮದ ಬಣ್ಣದ ಆಧಾರದ ಮೇಲೆ ತಾರತಮ್ಯ ತೊಡೆದುಹಾಕಲು ಸಾಮಾಜಿಕ ಬದಲಾವಣೆಯ ಅಗತ್ಯವಿದೆ ಎಂದು ಛತ್ತೀಸ್‌ಗಢ ಹೈಕೋರ್ಟ್ ಹೇಳಿದೆ.

ಹೈಕೋರ್ಟ್
ಹೈಕೋರ್ಟ್

By ETV Bharat Karnataka Team

Published : Dec 22, 2023, 11:58 AM IST

ಬಿಲಾಸ್‌ಪುರ( ಛತ್ತೀಸ್​​ಗಢ) :ಚರ್ಮದ ಬಣ್ಣದ ಆಧಾರದ ಮೇಲೆ ವಿವಾಹಿತ ಸಂಗಾತಿಯನ್ನು ಬಿಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ ಎಂದು ಛತ್ತೀಸ್‌ಗಢ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಪತಿ - ಪತ್ನಿಯರ ವಿಚ್ಛೇದನ ಪ್ರಕರಣದ ವಿಚಾರಣೆ ವೇಳೆ ಛತ್ತೀಸ್‌ಗಢ ಹೈಕೋರ್ಟ್ ಈ ವಿಚಾರವಾಗಿ ಪತಿಗೆ ಖಡಕ್​ ಎಚ್ಚರಿಕೆ ನೀಡಿತಲ್ಲದೆ, ಫೇರ್‌ನೆಸ್ ಕ್ರೀಮ್ ಉದ್ಯಮದ ಬಗ್ಗೆಯೂ ತಮ್ಮ ಅಸಮಾಧಾನವನ್ನು ಹೊರಹಾಕಿದೆ. ನ್ಯಾಯಮೂರ್ತಿ ಗೌತಮ್ ಭಾದುರಿ ಮತ್ತು ನ್ಯಾಯಮೂರ್ತಿ ದೀಪಕ್ ಕುಮಾರ್ ತಿವಾರಿ ಅವರಿದ್ದ ಪೀಠವು ವಿಚಾರಣೆ ವೇಳೆ, ಯಾವುದೇ ಕಾರಣಕ್ಕೆ ಅವನು ಅಥವಾ ಅವಳ ಚರ್ಮದ ಬಣ್ಣದ ಆಧಾರದ ಮೇಲೆ ವಿಚ್ಚೇದನ ನೀಡಲು ಸಾಧ್ಯ ಇಲ್ಲ ಎಂದು ಹೇಳಿದೆ.

ಏನಿದು ವಿಷಯ ?: ವ್ಯಕ್ತಿಯೊಬ್ಬರು ತನ್ನ ಪತ್ನಿಯಿಂದ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ತನ್ನ ಹೆಂಡತಿ ತನ್ನನ್ನು ತೊರೆದಿದ್ದಾರೆ ಮತ್ತು ಎಷ್ಟು ಪ್ರಯತ್ನ ಮಾಡಿದರೂ ಅವರು ಮನೆಗೆ ಮರಳಲು ನಿರಾಕರಿಸುತ್ತಿದ್ದರು ಎಂದು ಪತಿ ಹೇಳಿಕೊಂಡಿದ್ದಾರೆ. ಆದರೆ, ಪತಿ ತನ್ನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು ಎಂಬುದು ಪತ್ನಿಯ ವಾದವಾಗಿತ್ತು. ತನ್ನ ಚರ್ಮದ ಬಣ್ಣವನ್ನು ಗೇಲಿ ಮಾಡುವ ಮೂಲಕ ನಿಂದನೆ ಮತ್ತು ನಿಂದನೀಯ ಪದಗಳನ್ನು ಪತಿ ಬಳಸುತ್ತಿದ್ದರು. ಗರ್ಭಾವಸ್ಥೆಯಲ್ಲಿ ಪತಿ ತನಗೆ ದೈಹಿಕ ಕಿರುಕುಳ ನೀಡಿದ್ದಾರೆ ಎಂದು ಪತ್ನಿ ಆರೋಪಿಸಿದ್ದರು. ತನ್ನ ಕಪ್ಪನೆಯ ಚರ್ಮದಿಂದಾಗಿ ಬೇರೆ ಮಹಿಳೆಯನ್ನು ಮದುವೆಯಾಗುವುದಾಗಿ ಪದೇ ಪದೆ ಅಪಹಾಸ್ಯ ಮಾಡುತ್ತಿದ್ದರು ಎಂದು ಪತ್ನಿ ತನ್ನ ಪತಿ ವಿರುದ್ಧ ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದರು.

ಪತಿಯ ವಿಚ್ಛೇದನ ಅರ್ಜಿ ತಿರಸ್ಕರಿಸಿದ ಹೈಕೋರ್ಟ್​ :ಎರಡೂ ಕಕ್ಷಿದಾರರ ವಾದ ಆಲಿಸಿದ ಛತ್ತೀಸ್‌ಗಢ ಹೈಕೋರ್ಟ್, ಪತ್ನಿಯ ಆರೋಪಗಳನ್ನು ಹೆಚ್ಚು ದೃಢವಾಗಿ ಪರಿಗಣಿಸಿ, ಪತಿಯ ವಿಚ್ಛೇದನ ಅರ್ಜಿಯನ್ನು ತಿರಸ್ಕರಿಸಿತು. ಅಲ್ಲದೇ, ಕೇವಲ ಚರ್ಮದ ಬಣ್ಣದ ಆಧಾರದ ಮೇಲೆ ವಿವಾಹಿತ ಸಂಗಾತಿಯನ್ನು ಬಿಡುವ ಸ್ವಾತಂತ್ರ್ಯ ಯಾರಿಗೂ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿತು.

ಫೇರ್‌ನೆಸ್ ಕ್ರೀಮ್ ಉದ್ಯಮದ ವಿರುದ್ಧ ಕೋರ್ಟ್ ಕೋಪ: ಚರ್ಮದ ಬಣ್ಣದ ಆಧಾರದ ಮೇಲೆ ತಾರತಮ್ಯ ತೊಡೆದುಹಾಕಲು ಸಾಮಾಜಿಕ ಬದಲಾವಣೆಯ ಅಗತ್ಯವನ್ನು ನ್ಯಾಯಾಲಯ ಒತ್ತಿ ಹೇಳಿದೆ. ಕಾಸ್ಮೆಟಿಕ್ಸ್ ಉದ್ಯಮವು ಚರ್ಮವನ್ನು ಹೊಳಪುಗೊಳಿಸುವ ಉತ್ಪನ್ನಗಳೊಂದಿಗೆ ಕಪ್ಪು ತ್ವಚೆಯ ಜನರನ್ನು ಗುರಿಯಾಗಿರಿಸಿಕೊಳ್ಳುತ್ತದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತು. ಜಾಹೀರಾತುಗಳಲ್ಲಿ ಅವರನ್ನು ಕಡಿಮೆ ಆತ್ಮವಿಶ್ವಾಸ ಮತ್ತು ಅಸುರಕ್ಷಿತ ಎಂದು ತೋರಿಸಲಾಗುತ್ತಿದೆ. ಅದು ತಪ್ಪು. ಈ ತಾರತಮ್ಯ ಹೋಗಲಾಡಿಸುವಲ್ಲಿ ಸಾಮಾಜಿಕ ಬದಲಾವಣೆಯ ಅಗತ್ಯವಿದೆ ಎಂದು ನ್ಯಾಯಾಲಯ ಇದೇ ವೇಳೆ ಅಭಿಪ್ರಾಯಪಟ್ಟಿತು.

ಇದನ್ನೂ ಓದಿ:ಉದ್ಯಮಿಯಿಂದ ಜಪ್ತಿ ಹಣ ದೋಚಲು ಮುಂದಾದ ಪ್ರಕರಣ : 2ನೇ ಆರೋಪಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು

ABOUT THE AUTHOR

...view details