ರಾಯ್‌ಪುರ(ಛತ್ತೀಸ್‌ಗಢ):ದೇಶವನ್ನೇ ಬೆಚ್ಚಿ ಬೀಳಿಸಿರುವ ದೆಹಲಿಯ ಶ್ರದ್ಧಾ ವಾಕರ್ ಕೊಲೆ ಕೇಸ್ ತನಿಖೆ ಚಾಲ್ತಿಯಲ್ಲಿರುವಾಗಲೇ ಮತ್ತೊಂದು ಅಂಥದ್ದೇ ಘಟನೆ ಛತ್ತೀಸ್ಗಢದಲ್ಲಿ ಬೆಳಕಿಗೆ ಬಂದಿದೆ. ಪ್ರೀತಿಯ ಹೆಸರಲ್ಲಿ ಯುವತಿಯನ್ನು ಬಳಸಿಕೊಂಡು ಅರಣ್ಯ ಪ್ರದೇಶದಲ್ಲಿ ಕೊಲೆ ಮಾಡಿ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ.
ಛತ್ತೀಸ್ಗಢದ ರಾಯಪುರ ಜಿಲ್ಲೆಯ ಕೊರ್ಬಾದ ತನು ಕುರ್ರೆ(26) ಕೊಲೆಯಾದ ಯುವತಿ. ಒಡಿಶಾದ ಬಲಂಗಿರ್ ಮೂಲದ ಉದ್ಯಮಿ ಸಚಿನ್ ಅಗರ್ವಾಲ್ ಕೊಲೆ ಮಾಡಿದ ಆರೋಪಿ. ಪ್ರೀತಿಯ ನಾಟಕವಾಡಿ ಹತ್ಯೆ ಮಾಡಿದ ಪ್ರೇಮಿ ವಿರುದ್ಧ ಯುವತಿಯ ಪೋಷಕರು ದೂರು ನೀಡಿದ್ದು, ತಲೆಮರೆಸಿಕೊಂಡ ದುರುಳನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ಪ್ರಕರಣವೇನು?:ವಿದ್ಯಾವಂತೆಯಾದ ತನು ರಾಯಪುರದಲ್ಲಿ ಆ್ಯಕ್ಸಿಸ್ ಬ್ಯಾಂಕ್ನಲ್ಲಿ ಉದ್ಯೋಗಿಯಾಗಿ ಸೇರಿಕೊಂಡಿದ್ದರು. ಬಳಿಕ ಉದ್ಯಮಿಯಾದ ಸಚಿನ್ ಅಗರ್ವಾಲ್ ಪರಿಚಯವಾಗಿದೆ. ಇದು ಪ್ರೀತಿಗೂ ತಿರುಗಿದೆ. 3 ವರ್ಷಗಳಿಂದ ಇವರ ಮಧ್ಯೆ ಆತ್ಮೀಯತೆ ಬೆಳೆದಿತ್ತು. ಈ ವಿಷಯ ಯುವತಿಯ ಕುಟುಂಬಸ್ಥರಿಗೂ ತಿಳಿದಿತ್ತು. ತಾವಿಬ್ಬರೂ ಪ್ರೀತಿಸುತ್ತಿದ್ದಾಗಿ ಯುವತಿ ಮನೆಯಲ್ಲಿ ತಿಳಿಸಿದ್ದರು. ಇದಾದ ಬಳಿಕ ಮನೆಗೆ ಬರಲು ಕುಟುಂಬಸ್ಥರು ಆಕೆಯನ್ನು ಒತ್ತಾಯಿಸಿದ್ದರು.
ನವೆಂಬರ್ 21 ರಿಂದ ತನು ನಾಪತ್ತೆ:ಕೆಲ ದಿನಗಳ ಹಿಂದೆ ಯುವತಿ ಕುಟುಂಬಸ್ಥರೊಂದಿಗೆ ಸಂಪರ್ಕ ಕಳೆದುಕೊಂಡಿದ್ದರು. ಫೋನ್ ಕರೆ, ಮೆಸೇಜ್ ಎಲ್ಲವನ್ನು ನಿಲ್ಲಿಸಿದ್ದರು. ಇದರಿಂದ ಅನುಮಾನಪಟ್ಟ ಕುಟುಂಬಸ್ಥರು ಆಕೆಯ ಸಂಪರ್ಕಕ್ಕೆ ಪ್ರಯತ್ನಿಸಿದ್ದಾರೆ.
ಬ್ಯಾಂಕ್ನಿಂದಲೂ ಯಾವುದೇ ಮಾಹಿತಿ ಸಿಗದ ಕಾರಣ ಯುವತಿ ತನು ನವೆಂಬರ್ 21 ರಿಂದ ನಾಪತ್ತೆಯಾಗಿದ್ದಾಳೆ ಎಂದು ಪೋಷಕರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಬಾಯ್ಫ್ರೆಂಡ್ ಸಚಿನ್ ಬಗ್ಗೆ ವಿಚಾರಿಸಿದ್ದಾರೆ. ಆತ ತಲೆಮರೆಸಿಕೊಂಡಿದ್ದು ಗೊತ್ತಾಗಿದೆ.