ಜೈಪುರ (ರಾಜಸ್ಥಾನ): ಸೋಶಿಯಲ್ ಮೀಡಿಯಾದಲ್ಲಿ ಬೆಳೆದ ಗೆಳೆತನ ಕೊಲೆಯಲ್ಲಿ ಅಂತ್ಯವಾಗಿದೆ. ಸ್ವತಃ ಗೆಳೆಯನೇ ತನ್ನ ಗೆಳತಿಯನ್ನು ಕಿಡ್ನಾಪ್ ಮಾಡಿ ಕೊಲೆಗೈದು ಪೊಲೀಸರ ಅತಿಥಿ ಆಗಿದ್ದಾನೆ.
ಗುಜರಾತ್ನ ಯುವಕ ಮತ್ತು ಛತ್ತೀಸ್ಘಡದ 17 ವರ್ಷದ ಯುವತಿಯ ನಡುವೆ ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿತ್ತು. ಯುವತಿ ನೀಟ್ ಪರೀಕ್ಷೆ ತಯಾರಿಗೆಂದು ರಾಜಸ್ಥಾನದ ಕೋಟಾ ಜಿಲ್ಲೆಯಲ್ಲಿ ನೆಲೆಸಿದ್ದಳು. ಈ ನಡುವೆ ಯುವಕ ಯುವತಿಯನ್ನು ಭೇಟಿ ಮಾಡಲೆಂದು ಕೋಟಾಗೆ ಬಂದಿದ್ದಾನೆ. ಆಗ ಆಕೆಯನ್ನು ಅಪಹರಿಸಿ ದುಷ್ಕೃತ್ಯವೆಸಗಿದ್ದಾನೆ.
ಗೆಳೆಯನೊಂದಿಗೆ ಹೋದಾಕೆ ಮರಳಿ ಬರಲಿಲ್ಲ: ನೀಟ್ ಪರೀಕ್ಷೆ ತಯಾರಿ ನಡೆಸುತ್ತಿದ್ದ ಯುವತಿ ಕೋಟಾದ ನ್ಯೂ ರಾಜೀವ್ ಗಾಂಧಿ ಕಾಲೋನಿಯಲ್ಲಿರುವ ಹಾಸ್ಟೆಲ್ನಲ್ಲಿ ವಾಸವಾಗಿದ್ದಳು. ಆಕೆಯ ಸಾವಿಗೂ ಎರಡು ದಿನ ಮುನ್ನ ಗೆಳೆಯ ಗುಜರಾತ್ನಿಂದ ಬಂದು ಹಾಸ್ಟೆಲ್ ಸಮೀಪದ ಹೋಟೆಲ್ನಲ್ಲಿದ್ದ. ಅಂತೆಯೇ ಜೂ.5ರಂದು ಗೆಳೆಯನಿದ್ದ ಹೋಟೆಲ್ಗೆ ತೆರಳಿದ್ದ ಯುವತಿ ಆತನನ್ನು ಹೊರಗಡೆಯೇ ಭೇಟಿ ಮಾಡಿ ಬಂದಿದ್ದಳು. ಅಲ್ಲದೇ, ಮರುದಿನ ಜೂ.6ರಂದು ಬೆಳಗ್ಗೆ ಗೆಳೆಯನ ಜೊತೆಗೆ ಕೋಚಿಂಗ್ ಕ್ಲಾಸ್ಗೆ ತೆರಳಿದ್ದ ಯುವತಿ ಮರಳಿ ಬಂದಿಲ್ಲ.