ಕೊರ್ಬಾ, ಛತ್ತೀಸ್ಗಢ:ಜಿಲ್ಲೆಯಲ್ಲಿ ಮನಕಲುಕುವಂತಹ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸರ್ಕಾರದ ನಿಯಮಗಳು ಗಾಳಿಗೆ ತೂರಿದಂತೆ ಕಾಣುತ್ತಿದೆ. ಆರೋಗ್ಯ ಸೌಲಭ್ಯ ಮತ್ತು ಆಂಬ್ಯುಲೆನ್ಸ್ ಹೆಸರಿನಲ್ಲಿ ಆಗಾಗ್ಗೆ ಎಡವಟ್ಟುಗಳು ಕಂಡುಬರುತ್ತವೆ. ಒಂದೂವರೆ ವರ್ಷದ ಮಗುವಿನ ಶವವನ್ನು ಪಾಲಿಥಿನ್‌ನಲ್ಲಿ ಸುತ್ತಿ ಅಸಹಾಯಕ ತಂದೆಯೊಬ್ಬರು ಮರಣೋತ್ತರ ಪರೀಕ್ಷೆ ಮಾಡಲು ಬೈಕ್‌ನಲ್ಲಿ ವೈದ್ಯಕೀಯ ಆಸ್ಪತ್ರೆಗೆ ತೆರಳಿರುವ ಘಟನೆ ಕೊರ್ಬಾ ಜಿಲ್ಲೆಯಲ್ಲಿ ಕಂಡು ಬಂದಿದೆ.
ಮಗು ಸಾವನ್ನಪ್ಪಿದ್ದು ಹೇಗೆ?:ಈ ಘಟನೆ ಕೊರ್ಬಾ ಡೆವಲಪ್‌ಮೆಂಟ್ ಬ್ಲಾಕ್‌ನ ಅಡ್ಸೇನಾ ಗ್ರಾಮದಲ್ಲಿ ನಡೆದಿದೆ. ಇಲ್ಲಿ ನೆಲೆಸಿರುವ ದಾರಸ್ ರಾಮ್ ಯಾದವ್ ಅವರು ತಮ್ಮ ಪತ್ನಿ ಮತ್ತು ಮಗುವಿನೊಂದಿಗೆ ಕೃಷಿ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಈಗ ಕೃಷಿಯ ಸಮಯ.. ದಾರಸ್ ಪತ್ನಿ ಅವರು ತನ್ನ ಒಂದೂವರೆ ವರ್ಷದ ಮಗನ ಜೊತೆ ಜಮೀನಿಗೆ ಹೋಗಿದ್ದರು. ತಾಯಿ ವ್ಯವಸಾಯದಲ್ಲಿ ನಿರತರಾಗಿದ್ದಾಗ ಮಗು ಆಟವಾಡುತ್ತಾ ಜಮೀನಿನ ಬಳಿಯ ಕೊಳದ ಕಡೆಗೆ ಹೋಗಿದೆ.
ಇನ್ನು ತಾಯಿಗೆ ಮಗುವಿನ ಬಗ್ಗೆ ಎಚ್ಚರವಾಗಿದೆ. ಮಗು ಅತ್ತ-ಇತ್ತ ಕಾಣದಿದ್ದಾಗ ಕೊಳದ ಬಳಿ ಹುಡುಕಿದ್ದಾರೆ. ಆದರೆ ಅಷ್ಟರಲ್ಲಿ ಮಗು ಕೊಳದಲ್ಲಿ ಮುಳುಗಿತ್ತು. ಗಾಬರಿಗೊಂಡು ಅಲ್ಲಿದ್ದವರು ಕೆರೆಯಲ್ಲಿ ಮಗುವನ್ನು ಹುಡುಕಿ ಹೊರ ತೆಗೆದರು. ಮಗು ಪತ್ತೆಯಾಗಿದ್ದರೂ ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು. ಕೂಡಲೇ ಮಗುವನ್ನು ಲೇಮರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿದ್ದರು. ಅಲ್ಲಿ ವೈದ್ಯರು ತಪಾಸಣೆ ನಡೆಸಿದ ಬಳಿಕ ಮಗು ಮೃತಪಟ್ಟಿರುವುದಾಗಿ ಘೋಷಿಸಿದರು. ಬಳಿಕ ವೈದ್ಯರು ಮಗುವಿನ ಮರಣೋತ್ತರ ಪರೀಕ್ಷೆ ಮಾಡಿಸುವಂತೆ ವೈದ್ಯರು ಸೂಚಿಸಿದ್ದಾರೆ.
ಆಸ್ಪತ್ರೆಯಿಂದ ನೋ ಆಂಬ್ಯುಲೆನ್ಸ್: ಅಡ್ಸೇನ ಗ್ರಾಮವು ಜಿಲ್ಲಾ ಕೇಂದ್ರದಿಂದ ಸುಮಾರು 70 ಕಿ.ಮೀ ದೂರದಲ್ಲಿದೆ. ಮಗುವಿನ ತಂದೆ ದಾರಸ್ ರಾಮ್ ಯಾದವ್ ಅವರು ಮಗುವಿನ ಮರಣೋತ್ತರ ಪರೀಕ್ಷೆಗೆ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರನ್ನು ಕೋರಿದರು. ಆದರೆ, ಆಂಬುಲೆನ್ಸ್ ಇಲ್ಲ ಎಂಬ ಉತ್ತರ ಅವರಿಗೆ ಸಿಕ್ಕಿತು. ಸ್ವಂತ ವ್ಯವಸ್ಥೆ ಮಾಡಿಕೊಂಡು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಹೋಗುವಂತೆ ಅಲ್ಲಿನ ಸಿಬ್ಬಂದಿ ಸಲಹೆ ನೀಡಿದರು.
ಮಗುವಿನ ಶವ ಹೊತ್ತುಕೊಂಡು ಬೈಕ್‌ನಲ್ಲಿ ತೆರಳಿದ ತಂದೆ:ಒಂದೆಡೆ ಒಂದೂವರೆ ವರ್ಷದ ಮಗುವಿನ ಶವ, ಇನ್ನೊಂದೆಡೆ ಆತನ ಮರಣೋತ್ತರ ಪರೀಕ್ಷೆ ಮಾಡುವಂತೆ ಒತ್ತಡ. ಅಸಹಾಯಕ ತಂದೆ ಏನು ಮಾಡುತ್ತಾನೆ ಹೇಳಿ.. ಮರಣೋತ್ತರ ಪರೀಕ್ಷೆಗಾಗಿ ಆ ತಂದೆ ಮಗುವಿನ ಶವವನ್ನು ಪಾಲಿಥಿನ್‌ನಲ್ಲಿ ಸುತ್ತಿ ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ತೆರಳಿದ್ದರು. ಇದು ನನ್ನ ಮಗು. ನೀರಿನಲ್ಲಿ ಮುಳುಗಿ ಸಾವನ್ನಪ್ಪಿದೆ. ವೈದ್ಯರು ಮರಣೋತ್ತರ ಪರೀಕ್ಷೆ ಮಾಡಿಸುವಂತೆ ಹೇಳಿದರು. ಹತ್ತಿರದ ಆಸ್ಪತ್ರೆಯಲ್ಲೂ ವಿಚಾರಿಸಿದೆ. ಆದ್ರೆ ಅಲ್ಲಿಯೂ ಆಂಬ್ಯುಲೆನ್ಸ್ ಇಲ್ಲ ಎಂದು ಹೇಳಿದರು. ಹೀಗಾಗಿ ಬೈಕ್‌ನಲ್ಲಿಯೇ ಮಗುವಿನ ಮೃತದೇಹ ತೆಗೆದುಕೊಂಡು ಹೋಗಿದ್ದೇನೆ ಎಂದು ಮೃತ ಮಗುವಿನ ತಂದೆ ದಾರಸ್ ರಾಮ್ ಯಾದವ್ ಹೇಳಿದರು.
ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ: ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಬೈಕ್‌ನಲ್ಲಿ ಕೊಂಡೊಯ್ಯುವ ವಿಷಯ ವೈದ್ಯಾಧಿಕಾರಿಗೂ ತಲುಪಿತ್ತು. ಈ ಬಗ್ಗೆ ಮಾಹಿತಿ ಸಿಕ್ಕಿದೆ. ಯಾವ ಪರಿಸ್ಥಿತಿಯಲ್ಲಿ ಈ ಘಟನೆ ನಡೆದಿದೆ ಎಂಬುದು ಪತ್ತೆ ಹಚ್ಚಲಾಗುವುದು. ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳತ್ತೇವೆ ಎಂದು ಜಿಲ್ಲಾ ಸಿಎಂಎಚ್ಒ ಎಸ್.ಎನ್.ಕೇಸರಿ ಹೆಳಿದ್ದಾರೆ
ಓದಿ:ರಕ್ಷಾಬಂಧನಕ್ಕೆ ಸಹೋದರಿಯಿಂದ ವಿಶೇಷ ಉಡುಗೊರೆ : ಆಸ್ಪತ್ರೆ ಸೇರಿದ ಅಣ್ಣನಿಗೆ ಕಿಡ್ನಿ ದಾನ ಮಾಡಿದ್ಲು ತಂಗಿ