ಬಿಲಾಸ್‌ಪುರ (ಛತ್ತೀಸ್‌ಗಢ): ತನ್ನ ಪತ್ನಿಯನ್ನು ಕೊಂದು, ಆಕೆಯ ದೇಹವನ್ನು ತುಂಡು ತುಂಡು ಮಾಡಿ ಅವನ್ನು ತನ್ನ ಮನೆಯ ನೀರಿನ ಟ್ಯಾಂಕ್ನಲ್ಲಿ ಹಾಕಿ ಬಚ್ಚಿಟ್ಟ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಛತ್ತೀಸ್‌ಗಢದ ಬಿಲಾಸ್‌ಪುರದ ಉಸ್ಲಾಪುರ್‌ನಲ್ಲಿ ಈ ಘಟನೆ ನಡೆದಿದೆ. ಇದೀಗ ಮೃತದೇಹ ಪತ್ತೆಯಾಗಿದೆ. ಎರಡು ತಿಂಗಳ ಹಿಂದೆಯೇ ದೇಹದ ಭಾಗಗಳನ್ನು ಟ್ಯಾಂಕ್ನೊಳಕ್ಕೆ ಹಾಕಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಪತ್ನಿಯನ್ನು ಕೊಂದ ಆರೋಪಿಯನ್ನು ಪವನ್ ಠಾಕೂರ್ ಎಂದು ಗುರುತಿಸಲಾಗಿದೆ. ಪತ್ನಿ ಸತಿ ಸಾಹು ಅನೈತಿಕ ಸಂಬಂಧ ಹೊಂದಿದ್ದಾಳೆ ಎಂಬ ಶಂಕೆಯಿಂದ ಆಕೆಯನ್ನು ಕೊಂದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ದೇಶದಲ್ಲಿ ಸಂಚಲನ ಮೂಡಿಸಿದ್ದ, ದೆಹಲಿಯಲ್ಲಿ ನಡೆದ ಶ್ರದ್ಧಾ ವಾಕರ್ ಹತ್ಯೆ ಪ್ರಕರಣವನ್ನು ಮತ್ತೆ ಈ ಘಟನೆ ನೆನಪಿಸಿದೆ. ಸಕ್ರಿ ಪೊಲೀಸ್ ಠಾಣೆ ವ್ಯಾಪ್ತಿಯ ಉಸ್ಲಾಪುರ ಪ್ರದೇಶದಲ್ಲಿ ಈ ಅಪರಾಧ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಕ್ರಿ ಪೊಲೀಸರು ಭಾನುವಾರ ತಡರಾತ್ರಿ ಉಸ್ಲಾಪುರದ ಮನೆಯೊಂದರ ನೀರಿನ ಟ್ಯಾಂಕ್ನಿಂದ ಮಹಿಳೆಯ ಕೊಳೆತ ಶವವನ್ನು ಹೊರತೆಗೆದಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕೊಲೆ ನಡೆದ ಮನೆಯ ನೆರೆಹೊರೆಯವರು ಆ ಮನೆಯಿಂದ ದುರ್ವಾಸನೆ ಬರುತ್ತಿರುವ ಬಗ್ಗೆ ಪೊಲೀಸರಿಗೆ ತಿಳಿಸಿದಾಗ ಘಟನೆ ಬೆಳಕಿಗೆ ಬಂದಿದೆ. ನಂತರ ಸಕ್ರಿ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ಕೈಗೊಂಡು ಕೊಳೆತ ದೇಹವನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ಹೇಳಿದರು. ಪೊಲೀಸರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯಗಳ ತಜ್ಞರು ಅಪರಾಧ ನಡೆದ ಸ್ಥಳದಲ್ಲಿ ತನಿಖೆ ಕೈಗೊಂಡಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಆರೋಪಿ ಠಾಕೂರ್‌ನನ್ನು ವಶಕ್ಕೆ ಪಡೆದಿದ್ದಾರೆ.