ನವದೆಹಲಿ:ಛತ್ತೀಸ್ಗಢದಲ್ಲಿ ಸಿಎಂ ಬದಲಾವಣೆಗೆ ಒತ್ತಾಯ ಕೇಳಿಬರುತ್ತಿದೆ. ಇದರಿಂದಾಗಿ ಅಲ್ಲಿನ ಕಾಂಗ್ರೆಸ್ನಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿವೆ. ಈ ಬೆನ್ನಲ್ಲೇ ಛತ್ತಿಸ್ಗಢದ ಕೆಲವು ಕಾಂಗ್ರೆಸ್ ಶಾಸಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿಯಾದ ಪಿ.ಎಲ್.ಪುನಿಯಾ ಅವರ ದೆಹಲಿ ನಿವಾಸದಲ್ಲಿ ತಡರಾತ್ರಿ ಸಭೆ ನಡೆಸಿದ್ದಾರೆ.
ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡುವೆ ಇಂದು ಕಾಂಗ್ರೆಸ್ನಲ್ಲಿರುವ ಭಿನ್ನಾಭಿಪ್ರಾಯದ ಕುರಿತು ಸಭೆ ನಡೆಯಲಿದೆ. ಇದಕ್ಕೂ ಮೊದಲೇ ಪಿ.ಎಲ್.ಪುನಿಯಾ ಅವರೊಂದಿಗೆ ಕಾಂಗ್ರೆಸ್ ಶಾಸಕರು ಸಭೆ ನಡೆಸಿರುವುದು ಕುತೂಹಲ ಮೂಡಿಸಿದೆ.
ಭೂಪೇಶ್ ಬಘೇಲ್ ರಾಹುಲ್ ಗಾಂಧಿಯೊಂದಿಗೆ ಎರಡನೇ ಬಾರಿ ಇಂದು ಸಭೆ ನಡೆಸಲಿದ್ದಾರೆ. ಇದಕ್ಕೂ ಮುನ್ನ ಬುಧವಾರ ರಾಹುಲ್ ಅವರನ್ನು ಭೇಟಿಯಾಗಿ ಸಭೆ ನಡೆಸಿ, ಛತ್ತೀಸ್‌ಗಢ ಕಾಂಗ್ರೆಸ್ನಲ್ಲಿರುವ ಭಿನ್ನಮತದ ಬಗ್ಗೆ ಚರ್ಚಿಸಿದ್ದರು.
ರಾಹುಲ್ ಅವರೊಂದಿಗೆ ಚರ್ಚೆ ನಡೆಸಿ, ವಾಪಸಾಗಿದ್ದ ಅವರು ರಾಯಪುರದಲ್ಲಿ, 'ಎರಡೂವರೆ ವರ್ಷಗಳ ಪ್ಲ್ಯಾನ್' ಬಗ್ಗೆ ಮಾತನಾಡುವವರು, ಸರ್ಕಾರದಲ್ಲಿ ಅಸ್ಥಿರತೆ ತರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಅವರ ಪ್ರಯತ್ನ ಯಶಸ್ವಿಯಾಗುವುದಿಲ್ಲ. ಸೋನಿಯಾ ಗಾಂಧಿ ಅಥವಾ ರಾಹುಲ್ ಸೂಚನೆ ನೀಡಿದಾಗ ಮಾತ್ರ ನಾನು ಸಿಎಂ ಸ್ಥಾನದಿಂದ ಕೆಳಗೆ ಇಳಿಯುತ್ತೇವೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.