ರಾಯ್ಪುರ್(ಛತ್ತೀಸ್ಗಢ):ಬ್ರಾಹ್ಮಣರ ಬಗ್ಗೆ ವಿವಾದಿತ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿಸಲ್ಪಟ್ಟ ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆ ನಂದ ಕುಮಾರ್ ಬಘೇಲ್ ಅವರಿಗೆ ಇಂದು ಕೋರ್ಟ್ ಜಾಮೀನು ಮಂಜೂರು ಮಾಡಿತು.
ಸೆಪ್ಟೆಂಬರ್ 7ರಂದು ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ನಂದ ಕುಮಾರ್ ಬಘೇಲ್ ಅವರನ್ನು 15 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಇಂದು ಕೋರ್ಟ್ನಲ್ಲಿ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಅವರಿಗೆ ಜಾಮೀನು ನೀಡಿದರು.
ಏನಿದು ಪ್ರಕರಣ?
'ಬ್ರಾಹ್ಮಣರು ವಿದೇಶಿ ಮೂಲದವರು. ಅವರನ್ನು ದೇಶದಿಂದ ಹೊರಗೆ ಓಡಿಸಬೇಕು. ಜೊತೆಗೆ ಗ್ರಾಮಗಳಲ್ಲಿ ಅವರಿಗೆ ಬರಲು ಅನುಮತಿ ನೀಡಬಾರದು' ಎಂದು ಬಘೇಲ್ ಹೇಳಿಕೆ ನೀಡಿದ್ದರು. ಈ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಈ ಬೆನ್ನಲ್ಲೇ ಅವರನ್ನು ಬಂಧಿಸಿದ ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯನ್ನು 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಇದನ್ನೂ ಓದಿ: ದೇಶದಲ್ಲಿ ನಿಲ್ಲದ ಕಾಮುಕರ ಕ್ರೌರ್ಯ: ಮುಂಬೈನಲ್ಲಿ ಅತ್ಯಾಚಾರವೆಸಗಿ ಖಾಸಗಿ ಭಾಗಕ್ಕೆ ರಾಡ್ ಹಾಕಿ ವಿಕೃತಿ!
86 ವರ್ಷದ ನಂದ ಕುಮಾರ್ ಬಘೇಲ್ ವಿರುದ್ಧ ರಾಯ್ಪುರದ ಡಿಡಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್ 153-A (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ದ್ವೇಷ ಭಾವನೆ ಮೂಡಿಸುವುದು) ಮತ್ತು 505 (1) (b) (ಉದ್ದೇಶಪೂರ್ವಕವಾಗಿ ವಿವಿಧ ಗುಂಪುಗಳ ನಡುವೆ ದ್ವೇಷ ಭಾವನೆ ಬರುವಂತೆ ಮಾಡುವುದು) ಅಡಿಯಲ್ಲಿ ಪೊಲೀಸರು ಕೇಸು ದಾಖಲಿಸಿದ್ದರು.