ರಾಯ್ಪುರ್(ಛತ್ತೀಸ್ಗಢ):ಬ್ರಾಹ್ಮಣರ ಬಗ್ಗೆ ವಿವಾದಿತ ಹೇಳಿಕೆ ನೀಡಿರುವ ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರ ತಂದೆ ನಂದ ಕುಮಾರ್ ಬಘೇಲ್ ಅವರನ್ನು ಬಂಧಿಸಿರುವ ಪೊಲೀಸರು, 15 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಪಡೆದುಕೊಂಡಿದ್ದಾರೆ.
ವಿವಾದಿತ ಹೇಳಿಕೆ ಏನು?
'ಬ್ರಾಹ್ಮಣರು ವಿದೇಶಿ ಮೂಲದವರು. ಅವರನ್ನು ದೇಶದಿಂದ ಹೊರಗೆ ಓಡಿಸಬೇಕು' ಎಂದು ವಿವಾದಿತ ಹೇಳಿಕೆ ನೀಡಿದ್ದ ನಂದ ಕುಮಾರ್ ಬಘೇಲ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಈ ಬೆನ್ನಲ್ಲೇ ಅವರನ್ನು ಬಂಧಿಸಿರುವ ಪೊಲೀಸರು ಕೋರ್ಟ್ಗೆ ಹಾಜರುಪಡಿಸಿದ್ದಾರೆ. ಈ ಕುರಿತ ವಿಚಾರಣೆ ನಡೆಸಿದ ಕೋರ್ಟ್ ಆರೋಪಿಯನ್ನು 15 ದಿನಗಳ ನ್ಯಾಯಾಂಗ ಬಂಧನ ಒಪ್ಪಿಸಿದೆ.
ಇದನ್ನೂ ಓದಿ: ಸಮುದಾಯವೊಂದರ ವಿರುದ್ಧ ಅವಹೇಳಕಾರಿ ಹೇಳಿಕೆ: ಛತ್ತೀಸ್ಗಢ ಸಿಎಂ ಬಘೇಲ್ ತಂದೆ ವಿರುದ್ಧ ದೂರು
86 ವರ್ಷದ ನಂದ ಕುಮಾರ್ ಬಘೇಲ್ ವಿರುದ್ಧ ರಾಯ್ಪುರದ ಡಿಡಿ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ(IPC) ಸೆಕ್ಷನ್ 153-A (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ವಿಚಾರದಲ್ಲಿ ಎರಡು ಸಮುದಾಯಗಳ ನಡುವೆ ದ್ವೇಷ ಭಾವನೆ ಮೂಡಿಸುವುದು) ಮತ್ತು 505 (1) (b) (ಉದ್ದೇಶಪೂರ್ವಕವಾಗಿ ವಿವಿಧ ಗುಂಪುಗಳ ನಡುವೆ ದ್ವೇಷ ಭಾವನೆ ಬರುವಂತೆ ಮಾಡುವುದು) ಅಡಿಯಲ್ಲಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.
ಸಿಎಂ ಪ್ರತಿಕ್ರಿಯೆ
ಈ ವಿಚಾರವಾಗಿ ಪ್ರತಿಕ್ರಿಯಿಸಿದ ಸಿಎಂ ಬಘೇಲ್, 'ಕಾನೂನಿನ ಮುಂದೆ ಯಾರೂ ಕೂಡ ದೊಡ್ಡವರಲ್ಲ. ನಮ್ಮ ತಂದೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದೆ' ಎಂದು ಹೇಳಿದ್ದಾರೆ.