ರಾಯಪುರ (ಛತ್ತೀಸ್‌ಗಢ) :ನೀರಿನ ಸಂರಕ್ಷಣೆ, ಜಲ ಸಂಪನ್ಮೂಲಗಳ ಸಂರಕ್ಷಿಸುವುದು ಮತ್ತು ಒಳಚರಂಡಿ ವ್ಯವಸ್ಥೆ ನಿರ್ವಹಣೆಯಲ್ಲಿ ಸೂರಜ್‌ಪುರದ ಚಿಂದಿಯಾ ಗ್ರಾಮ ಪಂಚಾಯತ್ ಪೂರ್ವ ವಲಯದ ಅತ್ಯುತ್ತಮ ಗ್ರಾಮ ಪಂಚಾಯತ್ ಎಂದು ರಾಷ್ಟ್ರೀಯ ಜಲ ಪ್ರಶಸ್ತಿಯಲ್ಲಿ ಎರಡನೇ ಸ್ಥಾನ ದೊರೆತಿದೆ.
ನವದೆಹಲಿಯ ವಿಜ್ಞಾನ ಭವನದಲ್ಲಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಕೈಯಿಂದ ಜಿಲ್ಲಾ ಪಂಚಾಯತ್ ಸೂರಜ್‌ಪುರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ದೇವ್ ಅವರು ಸನ್ಮಾನ ಸ್ವೀಕರಿಸಿದರು. ಜಲ ಸಂರಕ್ಷಣೆಯ ಕೇಂದ್ರ ತಂಡವು ಚಿಂದಿಯಾ ಗ್ರಾಮವನ್ನು ನೀರಿನ ಸಂರಕ್ಷಣೆ, ನೀರಿನ ಮರು ಬಳಕೆ ಮತ್ತು ಒಳಚರಂಡಿ ವ್ಯವಸ್ಥೆ ನಿರ್ವಹಣೆಯಂತಹ ಹಲವು ನಿಯತಾಂಕಗಳನ್ನು ಪರಿಶೀಲಿಸಿತು.
ತಂಡದಿಂದ ಸಂಪೂರ್ಣ ಅವಲೋಕನದ ನಂತರ ಚಿಂದಿಯಾ ಗ್ರಾಮಕ್ಕೆ ಪ್ರಶಸ್ತಿ ನೀಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ದೇವ್ ತಿಳಿಸಿದ್ದಾರೆ. ಮೊದಲು ರೈತರು ಐದು ಎಕರೆಯಲ್ಲಿ ಮಾತ್ರ ಕೃಷಿ ಮಾಡುತ್ತಿದ್ದರು. ಈಗ 150 ಎಕರೆ ಪ್ರದೇಶವು ನೀರಾವರಿಗೆ ಒಳಪಟ್ಟಿದೆ ಎಂದು ಜಿಲ್ಲಾಧಿಕಾರಿ ಗೌರವ್ ಸಿಂಗ್ ಹೇಳಿದರು.
ಇದೇ ವೇಳೆ, ಬಿಹಾರದ ಗಯಾ ಜಿಲ್ಲೆಯ ತೆಲಾರಿ ಪಂಚಾಯತ್‌ಗೆ ಅತ್ಯುತ್ತಮ ಗ್ರಾಮ ಪಂಚಾಯತ್-ಪೂರ್ವ ವಲಯಕ್ಕೆ ಪ್ರಥಮ ಬಹುಮಾನ, ಅದೇ ವಿಭಾಗದಲ್ಲಿ ತೃತೀಯ ಬಹುಮಾನವನ್ನು ಜಾರ್ಖಂಡ್‌ನ ಖುಂಟಿ ಜಿಲ್ಲೆಯ ಗುಣಿ ಪಂಚಾಯತ್‌ಗೆ ನೀಡಲಾಗಿದೆ. ರಾಷ್ಟ್ರೀಯ ಜಲ ಪ್ರಶಸ್ತಿಗಳನ್ನು ಜಲಶಕ್ತಿ ಸಚಿವಾಲಯವು ನೀರಿನ ನಿರ್ವಹಣೆಯ ಕ್ಷೇತ್ರದಲ್ಲಿ ಅನುಕರಣೀಯ ಕೆಲಸಕ್ಕಾಗಿ ಮತ್ತು ನೀರಿನ ಪ್ರಾಮುಖ್ಯತೆ ಒತ್ತಿಹೇಳಲು ನೀರಿನ ಅಭಿಯಾನಗಳ ವಿಸ್ತರಣೆಗಾಗಿ ಈ ಪ್ರಶಸ್ತಿ ನೀಡುತ್ತಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರ ಸಮ್ಮುಖದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಯಿತು.
ಇದನ್ನೂ ಓದಿ:ಪ್ರಧಾನಮಂತ್ರಿ ಜನಧನ್ ಲೂಟ್ ಯೋಜನೆ.. ಇಂಧನ ದರ ಏರಿಕೆ ವಿರುದ್ಧ ರಾಹುಲ್ ಗಾಂಧಿ ಕಿಡಿ..ಕಿಡಿ