ಭೋಪಾಲ್/ರಾಯಪುರ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಇಂದು ಮಹತ್ವದ ದಿನ. ಮಧ್ಯಪ್ರದೇಶದ ಎಲ್ಲ 230 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಹಾಗೂ ಛತ್ತೀಸ್ಗಢ 70 ಕ್ಷೇತ್ರಗಳಿಗೆ ಅಂತಿಮ ಹಂತದ ಮತದಾನ ಪ್ರಗತಿಯಲ್ಲಿದೆ. ಇದರೊಂದಿಗೆ ಮಿಜೋರಾಂ ಸೇರಿ ಮೂರು ರಾಜ್ಯಗಳ ಮತ ಸಮರಕ್ಕೆ ತೆರೆ ಬೀಳಲಿದೆ. ರಾಜಸ್ಥಾನ (ನ.25) ಹಾಗೂ ತೆಲಂಗಾಣದಲ್ಲಿ (ನ.30) ಮತದಾನ ಇನ್ನಷ್ಟೇ ನಡೆಯಬೇಕಿದೆ.
ನವೆಂಬರ್ 7ರಂದು ಮಿಜೋರಾಂನ ಎಲ್ಲ 40 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ 78ರಷ್ಟು ಮತದಾನವಾಗಿತ್ತು. ಅದೇ ದಿನ ಛತ್ತೀಸ್ಗಢದ 90 ಸ್ಥಾನಗಳ ಪೈಕಿ 20 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನವಾಗಿದ್ದು, ಶೇ.71ರಷ್ಟು ಪೋಲಿಂಗ್ ದಾಖಲಾಗಿದೆ. ಇಂದು ಛತ್ತೀಸ್ಗಢದ 22 ಜಿಲ್ಲೆಗಳ 70 ವಿಧಾನಸಭಾ ಸ್ಥಾನಗಳಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಒಟ್ಟು 1.63 ಕೋಟಿಗೂ ಅಧಿಕ ಮತದಾರರು ಹಕ್ಕು ಚಲಾಯಿಸಲಿದ್ದಾರೆ.
70 ಕ್ಷೇತ್ರ - 958 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ: ಛತ್ತೀಸ್ಗಢದ 70 ಕ್ಷೇತ್ರಗಳಲ್ಲಿ 51 ಪಕ್ಷಗಳಿಂದ ಒಟ್ಟು 958 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 130 ಮಹಿಳಾ ಅಭ್ಯರ್ಥಿಗಳು, ಓರ್ವ ತೃತೀಯಲಿಂಗಿ ಸೇರಿದ್ದಾರೆ. ಆಮ್ ಆದ್ಮಿ ಪಕ್ಷ - 44, ಬಿಎಸ್‌ಪಿ - 44, ಕಾಂಗ್ರೆಸ್ - 70, ಬಿಜೆಪಿ - 70, ಜೆಸಿಸಿಜೆ - 67 ಮತ್ತು 357 ಸ್ವತಂತ್ರ ಅಭ್ಯರ್ಥಿಗಳು ಹಾಗೂ 304 ಇತರೆ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯುವರು. ಬಹುತೇಕ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಏರ್ಪಟ್ಟಿದೆ.
ಇನ್ನುಳಿದ 70 ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದೆ. ನಿಮ್ಮ ಒಂದು ಮತ ಯುವಕರು, ರೈತರು, ಮಹಿಳೆಯರ ಭವಿಷ್ಯ ನಿರ್ಧರಿಸುತ್ತದೆ. "ದಯವಿಟ್ಟು ಮನೆಯಿಂದ ಹೊರ ಬಂದು ಮತ ಚಲಾಯಿಸಿ. ಅಭಿವೃದ್ಧಿಗಾಗಿ ಮತ ಚಲಾಯಿಸಿ" ಎಂದು ಛತ್ತೀಸ್ಗಢ ಸಿಎಂ ಭೂಪೇಶ್ ಬಾಘೇಲ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.