ಬಲೋಡ್(ಛತ್ತೀಸಗಢ):ದೇಶಾದ್ಯಂತ ಕೊರೊನಾ ಸೃಷ್ಟಿಸಿರುವ ಆತಂಕ ಅಷ್ಟಿಷ್ಟಲ್ಲ. ಪ್ರತಿದಿನ ಮಹಾಮಾರಿಗೆ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದರೆ, ಇನ್ನೂ ಅನೇಕರು ಸೋಂಕಿಗೊಳಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಈ ಮಧ್ಯೆ ಕೆಲವೊಂದು ವಿಚಿತ್ರ ಘಟನೆಗಳು ಬೆಳಕಿಗೆ ಬರುತ್ತಿವೆ. ಸದ್ಯ ಅಂತಹದೊಂದು ಘಟನೆ ಛತ್ತೀಸಗಢದಲ್ಲಿ ಜರುಗಿದೆ.
ಕೋವಿಡ್ ಸೋಂಕಿಗೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ವಧು-ವರ ಇಬ್ಬರೂ ಆಸ್ಪತ್ರೆಯಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಲೋಡ್ನ ಕೋವಿಡ್ ಚಿಕಿತ್ಸಾ ಕೇಂದ್ರದಲ್ಲಿ ಕೊರೊನಾ ಸೋಂಕಿತ ವಧು-ವರ ಚಿಕಿತ್ಸೆ ಪಡೆಯುತ್ತಿದ್ದರು. ಅವರು ಇಲ್ಲೇ ವಿವಾಹ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಹೀಗಾಗಿ ಕೋವಿಡ್ ಸೆಂಟರ್ನ್ನ ವಿಶೇಷವಾಗಿ ಅಲಂಕರಿಸಲಾಯಿತು. ಕೋವಿಡ್ ಕೇರ್ ಸೆಂಟರ್ನ್ನ ಹೂವುಗಳಿಂದ ಶೃಂಗಾರಗೊಳಿಸಲಾಗಿದ್ದು, ಎದುರುಗಡೆ ಚಪ್ಪರ ಸಹ ಹಾಕಲಾಗಿತ್ತು. ಇದಕ್ಕೆ ಅಲ್ಲಿನ ಸಿಬ್ಬಂದಿ ಸಹ ಸಹಕಾರ ನೀಡಿದ್ದಾರೆ. ಇತರೆ ರೋಗಿಗಳು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಎಲ್ಲರೂ ಸಾಮಾಜಿಕ ಅಂತರದೊಂದಿಗೆ ಹಾಗೂ ಮಾಸ್ಕ್ ಧರಿಸಿದ್ದರು.