ಕೊಂಡಗಾಂವ್ (ಛತ್ತೀಸ್‌ಗಢ): ಇಲ್ಲಿನ ಕೊಂಡಗಾಂವ್ ಜಿಲ್ಲೆಯಲ್ಲಿ ಶಿಶುವಿನ ಶವವನ್ನು ಮನೆಗೆ ಸಾಗಿಸುತ್ತಿದ್ದ ಆಂಬ್ಯುಲೆನ್ಸ್‌ಗೆ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಮಕ್ಡಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಡಗಾಂವ್-ಜಗ್ದಲ್‌ಪುರ ರಸ್ತೆಯ ಬಡಗಾಂವ್ ಗ್ರಾಮದ ಬಳಿ ಶನಿವಾರ ನಡೆದ ಈ ಘಟನೆಯಲ್ಲಿ ಆಂಬ್ಯುಲೆನ್ಸ್ ಚಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಅವರು ತಿಳಿಸಿದ್ದಾರೆ. ದಂಪತಿಯ ಒಂದು ತಿಂಗಳ ಮಗು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ ನಂತರ ಬಸ್ತಾರ್ ಜಿಲ್ಲೆಯ ದಿಮ್ರಾಪಾಲ್‌ನಲ್ಲಿರುವ ಸರ್ಕಾರಿ ವೈದ್ಯಕೀಯ ಕಾಲೇಜಿನಿಂದ ಒಬ್ಬ ವ್ಯಕ್ತಿ, ಅವನ ಹೆಂಡತಿ ಮತ್ತು ತಾಯಿ ಮನೆಗೆ ಮರಳುತ್ತಿದ್ದರು ಎಂದು ಇಲ್ಲಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೃತದೇಹಗಳು ಮರಣೋತ್ತರ ಪರೀಕ್ಷೆಗೆ ರವಾನೆ:ಈ ವೇಳೆ ಎದುರಿನಿಂದ ವೇಗವಾಗಿ ಬಂದ ಲಾರಿ ಆಂಬ್ಯುಲೆನ್ಸ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮೂವರು ಕುಟುಂಬದ ಸದಸ್ಯರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆಂಬ್ಯುಲೆನ್ಸ್ ಚಾಲಕನಿಗೆ ಗಂಭೀರ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿದ ಬಳಿಕ ಪೊಲೀಸ್ ತಂಡ ಸ್ಥಳಕ್ಕೆ ಆಗಮಿಸಿದೆ. 30 ವರ್ಷದ ಗಾಯಾಳು ಚಾಲಕನನ್ನು ಸಮೀಪದ ಆಸ್ಪತ್ರೆಗೆ ಸ್ಥಳಾಂತರಿಸಿ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಟ್ರಕ್ ಚಾಲಕನನ್ನು ಪತ್ತೆಹಚ್ಚಲು ಪ್ರಯತ್ನ: ಮೃತರನ್ನು ರಾಮೇಶ್ವರ್ ನಾಗ್ (35), ಅವರ ಪತ್ನಿ ಅನಿತಾ (30) ಮತ್ತು ತಾಯಿ ಸೋನ್ಬಾತಿ (60) ಎಂದು ಗುರುತಿಸಲಾಗಿದ್ದು, ಎಲ್ಲರೂ ಜಿಲ್ಲೆಯ ಸೊದ್ಮಾ ಗ್ರಾಮದವರು ಎಂದು ಅಧಿಕಾರಿ ತಿಳಿಸಿದ್ದಾರೆ. ಘಟನೆಯ ನಂತರ ಸ್ಥಳದಿಂದ ಪರಾರಿಯಾಗಿರುವ ಟ್ರಕ್ ಚಾಲಕನನ್ನು ಪತ್ತೆ ಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅವರು ಹೇಳಿದ್ದಾರೆ. ಈ ಸಂಬಂಧ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಭೀಕರ ಸರಣಿ ಅಪಘಾತ:ಇನ್ನೊಂದೆಡೆ ಚಾಲಕನ ನಿಯಂತ್ರಣ ತಪ್ಪಿದ ಕಂಟೈನರ್ ಇತರೆ ವಾಹನಗಳ ಮೇಲೆ ಹರಿದ ಪರಿಣಾಮ ಸಂಭವಿಸಿದ ಭೀಕರ ಸರಣಿ ಅಪಘಾತದಲ್ಲಿ 10 ಮಂದಿ ಧಾರುಣವಾಗಿ ಮೃತಪಟ್ಟ ಘಟನೆ ಮಹಾರಾಷ್ಟ್ರದಲ್ಲಿ (ಜುಲೈ 4-2023) ಮಧ್ಯಾಹ್ನ ನಡೆದಿತ್ತು. ಗಡಿಭಾಗದ ಪಲಾಸ್ನೇರ್ ಗ್ರಾಮದ ಮುಂಬೈ ಆಗ್ರಾ ಹೆದ್ದಾರಿಯಲ್ಲಿ ಈ ಭೀಕರ ದುರಂತ ಸಂಭವಿಸಿತ್ತು. ಘಟನೆಯಲ್ಲಿ 28 ಮಂದಿ ಗಾಯಗೊಂಡಿದ್ದು, ಅವರನ್ನು ಶಿರಪುರ ಕಾಟೇಜ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು.
ವಂಡರ್ ಸಿಮೆಂಟ್ ಕಂಪನಿಯ ಜಲ್ಲಿ ಕಲ್ಲು ತುಂಬಿದ್ದ ಕಂಟೈನರ್ ನಿಯಂತ್ರಣ ಕಳೆದುಕೊಂಡು ಮುಂದಿದ್ದ ಕಾರಿಗೆ ಡಿಕ್ಕಿ ಹೊಡೆದಿತ್ತು. ನಂತರ ಇತರ ವಾಹನಗಳ ಮೇಲೂ ಹರಿದಿತ್ತು. ಅಷ್ಟಕ್ಕೆ ನಿಲ್ಲದ ಅದು ಹೆದ್ದಾರಿ ಬಳಿ ಇದ್ದ ಸಣ್ಣ ಹೋಟೆಲ್ ಒಳಗೆ ನುಗ್ಗಿತ್ತು. ಇದರಿಂದ ಸ್ಥಳದಲ್ಲಿ ಭೀಕರತೆ ಉಂಟಾಗಿತ್ತು. ಮೊದಲು ಸ್ಥಳದಲ್ಲೇ 7 ಮಂದಿ ಸಾವನ್ನಪ್ಪಿದ್ದರು. ಗಂಭೀರ ಗಾಯಗೊಂಡಿದ್ದವರನ್ನು ಆಸ್ಪತ್ರೆಗೆ ಸೇರಿಸಿದಾಗ ಮತ್ತೆ ಮೂವರು ಸಾವನ್ನಪ್ಪಿದ್ದರು.
ಇದನ್ನೂ ಓದಿ:Watch video: ಮಹಾರಾಷ್ಟ್ರ- ಮಧ್ಯಪ್ರದೇಶ ಗಡಿಯಲ್ಲಿ ಭೀಕರ ರಸ್ತೆ ಅಪಘಾತ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ..