ಮುಂಬೈ (ಮಹಾರಾಷ್ಟ್ರ) : ಇತಿಹಾಸ ಪ್ರಸಿದ್ಧ ಮರಾಠ ನಾಯಕ ಛತ್ರಪತಿ ಶಿವಾಜಿಯ 'ವಾಘ್ ನಖ್' (ಹುಲಿಯ ಉಗುರು) ಶೀಘ್ರದಲ್ಲೇ ಸ್ವದೇಶಕ್ಕೆ ಮರಳಲಿದೆ. 1659ರಲ್ಲಿ ಬಿಜಾಪುರ ಸುಲ್ತಾನರ ಜನರಲ್ ಅಫ್ಜಲ್ ಖಾನ್ನನ್ನು ಕೊಲ್ಲಲು ಛತ್ರಪತಿ ಶಿವಾಜಿ ಮಹಾರಾಜ ಬಳಸಿದ್ದ ಹುಲಿ ಉಗುರುಗಳ ಆಕಾರದ ಕಠಾರಿಯನ್ನು ಮರಳಿ ಭಾರತಕ್ಕೆ ನೀಡಲು ಯುಕೆ ಅಧಿಕಾರಿಗಳು ಒಪ್ಪಿಗೆ ನೀಡಿದ್ದಾರೆ. ಹೀಗಾಗಿ ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂತಿವಾರ್ ಅವರು ಅಕ್ಟೋಬರ್ ಆರಂಭದಲ್ಲೇ ಒಪ್ಪಂದಕ್ಕೆ ಸಹಿ ಹಾಕಲು ಲಂಡನ್ಗೆ ಭೇಟಿ ನೀಡಲಿದ್ದಾರೆ.
ಈ ಬಗ್ಗೆ ಈಟಿವಿ ಭಾರತದ ಜೊತೆ ಮಾತನಾಡಿರುವ ಸಚಿವ, ವಾಘ್ ನಖ್ ಅಕ್ಟೋಬರ್ನಲ್ಲಿ ಮಹಾರಾಷ್ಟ್ರಕ್ಕೆ ಬರಲಿದೆ. ಈ ಬಗ್ಗೆ ಬ್ರಿಟನ್ ಸರ್ಕಾರದಿಂದ ಪತ್ರವೂ ಬಂದಿದೆ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
ಬ್ರಿಟನ್ ಜೊತೆ ಪತ್ರ ವ್ಯವಹಾರ: ಮರಾಠ ಸಾಮ್ರಾಜ್ಯದ ಐತಿಹಾಸಿಕ ಪ್ರತೀಕವಾಗಿರುವ ಛತ್ರಪತಿ ಶಿವಾಜಿ ಮಹಾರಾಜರ ಜಗದಂಬಾ ಖಡ್ಗ ಹಾಗೂ ಪ್ರಸಿದ್ಧ ವಾಘ್ ನಖ್ ಅನ್ನು ಮರಳಿ ಸ್ವದೇಶಕ್ಕೆ ತರಲು ರಾಜ್ಯ ಸರ್ಕಾರ ಬ್ರಿಟಿಷ್ ಸರ್ಕಾರದ ಜೊತೆ ಪತ್ರ ವ್ಯವಹಾರ ಮಾಡಿದೆ. ಪತ್ರಕ್ಕೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಬ್ರಿಟನ್ ಸರ್ಕಾರ ನೀಡಿದೆ. ಈ ಮೂಲಕ ಶಿವಾಜಿ ಮಹಾರಾಜರ ಎರಡು ಆಯುಧಗಳು ಮಹಾರಾಷ್ಟ್ರಕ್ಕೆ ಮರಳುತ್ತಿದ್ದು, ಮರಾಠಿಗರ ಸಂತಸ ಉತ್ತುಂಗಕ್ಕೆ ಏರಿದೆ ಎಂದು ಮುಂಗಂತಿವಾರ್ ಹೇಳಿದರು.
ಪ್ರಸ್ತುತ ಬ್ರಿಟನ್ನಲ್ಲಿರುವ ವಾಘ್ ನಖ್: ಶಿವಾಜಿ ಮಹಾರಾಜರು ಅಫ್ಜಲ್ ಖಾನ್ನನ್ನು ಕೊಲ್ಲಲು ಬಳಸಿದ್ದ ಹುಲಿ ಉಗುರಿನ ಆಕಾರದ ಆಯುಧವನ್ನು ಬ್ರಿಟನ್ನಿಂದ ವಾಪಸ್ ಮಹಾರಾಷ್ಟ್ರಕ್ಕೆ ತರುವ ಬಗ್ಗೆ ರಾಜ್ಯ ಸರ್ಕಾರ ಬ್ರಿಟನ್ ಜೊತೆ ಒಪ್ಪಂದ ಮಾಡಿಕೊಳ್ಳಲಿದೆ. ಈ ಒಪ್ಪಂದಕ್ಕೆ ಸಚಿವ ಮುಂಗಂತಿವಾರ್ ಅಕ್ಟೋಬರ್ ಆರಂಭದಲ್ಲಿ ಬ್ರಿಟನ್ಗೆ ತೆರಳಿ ಸಹಿ ಹಾಕಲಿದ್ದಾರೆ. ಸದ್ಯ ಈ ವಾಘ್ ನಘ್ ಕಠಾರಿಯನ್ನು ಬ್ರಿಟನ್ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿದೆ.
"ವಾಘ್ ನಖ್ ಅನ್ನು ಮಹಾರಾಷ್ಟ್ರಕ್ಕೆ ಹಿಂತಿರುಗಿಸಲು ಬ್ರಿಟನ್ ಒಪ್ಪಿಕೊಂಡಿದ್ದು, ಹಿಂದೂ ಕ್ಯಾಲೆಂಡರ್ ಆಧಾರದಲ್ಲಿ ಶಿವಾಜಿ ಅಫ್ಜಲ್ ಖಾನ್ನನ್ನು ಕೊಂದ ದಿನದ ವಾರ್ಷಿಕೋತ್ಸವಕ್ಕೆ ಅದನ್ನು ಮರಳಿ ಪಡೆಯಲು ಚಿಂತಿಸುತ್ತಿದ್ದೇವೆ. ಗ್ರೆಗೋರಿಯನ್ ಕ್ಯಾಲೆಂಡರ್ ಆಧಾರದ ಮೇಲೆ ಶಿವಾಜಿ ಅಫ್ಜಲ್ ಖಾನ್ನನ್ನು ಹತ್ಯೆ ಮಾಡಿದ ದಿನಾಂಕ ನವೆಂಬರ್ 10. ಆದರೆ, ನಾವು ಹಿಂದೂ ತಿಥಿ ಕ್ಯಾಲೆಂಡರ್ ಆಧರಿಸಿ ದಿನಾಂಕಗಳನ್ನು ರೂಪಿಸುತ್ತಿದ್ದೇವೆ. ಇಲ್ಲವಾದಲ್ಲಿ ಇತರ ಕೆಲವು ದಿನಾಂಕಗಳನ್ನು ಕೂಡ ಪರಿಗಣಿಸಲಾಗುತ್ತಿದೆ. ಅದರ ಜೊತೆಗೆ ವಾಘ್ ನಖ್ ಅನ್ನು ಹಿಂದಕ್ಕೆ ತರುವ ವಿಧಾನಗಳನ್ನು ಕೂಡ ರೂಪಿಸಲಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಪ್ರಸಿದ್ಧ ವಾಘ್ ನಖ್ ಅಕ್ಟೋಬರ್ನಲ್ಲಿಯೇ ಮಹಾರಾಷ್ಟ್ರಕ್ಕೆ ಬರಬಹುದು" ಎಂದು ತಿಳಿಸಿದ್ದಾರೆ.