ಮುಂಬೈ (ಮಹಾರಾಷ್ಟ್ರ) : 'ವಾಘ್ ನಖ್' (ಛತ್ರಪತಿ ಶಿವಾಜಿ ಮಹಾರಾಜರು ಬಳಸುತ್ತಿದ್ದ ಲೋಹದ ಉಗುರುಗಳು) ಅನ್ನು ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗುವುದು ಮತ್ತು ಸಾರ್ವಜನಿಕರು ಇದನ್ನು ವೀಕ್ಷಿಸಲು ಅವಕಾಶ ನೀಡಲಾಗುವುದು ಎಂದು ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂತಿವಾರ್ ಭಾನುವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಲಂಡನ್‌ನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜರ 'ವಾಘ್ ನಖ್' ಅನ್ನು ರಾಜ್ಯಕ್ಕೆ ತರಲಾಗುವುದು. ಈ ಬಗ್ಗೆ ಬ್ರಿಟನ್ ಸರ್ಕಾರದಿಂದ ಪತ್ರ ಬಂದಿದೆ. ಶಿವಾಜಿ ಮಹಾರಾಜರ ಪ್ರಸಿದ್ಧ 'ಜಗದಂಬಾ' ಖಡ್ಗ ಮತ್ತು 'ವಾಘ್ ನಖ್ (ಹುಲಿಯ ಉಗುರುಗಳು) ಮಹಾರಾಷ್ಟ್ರಕ್ಕೆ ತರಲು ರಾಜ್ಯ ಸರ್ಕಾರವು ಪತ್ರ ವ್ಯವಹಾರದ ಮೂಲಕ ಬ್ರಿಟಿಷ್ ಸರ್ಕಾರದೊಂದಿಗೆ ಸಂಪರ್ಕದಲ್ಲಿದೆ. ಅಕ್ಟೋಬರ್ 3 ರಂದು ಲಂಡನ್‌ನಲ್ಲಿ 'ವಾಘ್ ನಖ್' ಕುರಿತಾದ ತಿಳಿವಳಿಕೆ ಪತ್ರಕ್ಕೆ ಸಹಿ ಹಾಕಲಾಗುವುದು, ಈ ವಾಘ್ ನಖ್ ಛತ್ರಪತಿ ಶಿವರಾಯರ ಸಾಧನೆಯ ಪ್ರತೀಕ. ನವೆಂಬರ್ ತಿಂಗಳಲ್ಲಿ ಈ ಹುಲಿ ಉಗುರುಗಳು ಮಹಾರಾಷ್ಟ್ರಕ್ಕೆ ಬರಲಿವೆ" ಎಂದು ಅವರು ತಿಳಿಸಿದ್ದಾರೆ.
1659 ರಲ್ಲಿ ಬಿಜಾಪುರ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್, ಶಿವಾಜಿ ಮಹಾರಾಜನನ್ನು ಕೊಲ್ಲಲು ಸಂಚು ರೂಪಿಸಿದ್ದ. ಆದರೆ, ನಮ್ಮ ಮಹಾನಾಯಕ ಶಿವಾಜಿ ಮಹಾರಾಜರು ತನ್ನ ಪ್ರಜೆಗಳ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದ ಅಫ್ಜಲ್ ಖಾನ್ನನ್ನು 'ವಾಘ್ ನಖ್'ಯಿಂದ ಹತ್ಯೆ ಮಾಡಿದ್ದರು. ಇದೀಗ, ಛತ್ರಪತಿ ಶಿವಾಜಿ ಮಹಾರಾಜರ 350ನೇ ಪಟ್ಟಾಭಿಷೇಕವನ್ನು ಆಚರಿಸುತ್ತಿದ್ದೇವೆ. ಇದರ ಸವಿ ನೆನಪಿಗಾಗಿ ಮತ್ತು ಶಿವಾಜಿ ಮಹಾರಾಜರ 350 ವರ್ಷದ ಪಟ್ಟಾಭಿಷೇಕದ ನಿಮಿತ್ತ ಮಹಾರಾಷ್ಟ್ರದಲ್ಲಿ ಸಾಕಷ್ಟು ಕಾರ್ಯಕ್ರಮಗಳು ನಡೆಯಲಿವೆ. ಮ್ಯೂಸಿಯಂನಲ್ಲಿ 'ವಾಘ್ ನಖ್' ಪ್ರದರ್ಶಿಸುವ ಮೂಲಕ ನಾವು ಜನರಿಗೆ ವೀಕ್ಷಿಸಲು ಅವಕಾಶವನ್ನು ನೀಡುತ್ತೇವೆ" ಎಂದರು.