ವಾರಾಣಸಿ:ಧಾರ್ಮಿಕ ನಗರಿ ಕಾಶಿಯಲ್ಲಿ ಮಂಗಳವಾರದಿಂದ ಮಹಾನಾಟ್ಯ ಜನತಾರಾಜೋತ್ಸವ ಆರಂಭವಾಗಿದ್ದು, ಮೊದಲ ದಿನ ಛತ್ರಪತಿ ಶಿವಾಜಿ ಜೀವನಗಾಥೆಗೆ ವಾರಣಾಸಿ ಸಾಕ್ಷಿಯಾಯಿತು.
ಛತ್ರಪತಿ ಶಿವಾಜಿ ಜೀವನದ ಕಥೆ ಹಾಗೂ ಹಿಂದವಿ ಸ್ವರಾಜ್ ಘೋಷಣೆಯಾದ ಬಗೆಗೆ ಮೊದಲ ಸಂಚಿಕೆ ಆರಂಭವಾಗಿದ್ದು, ಪ್ರಸ್ತುತಿ ವೀಕ್ಷಕರನ್ನು ಮಂತ್ರಮುಗ್ಧಗೊಳಿಸಿದೆ. ನಿಜವಾದ ಆನೆಗಳು, ಕುದುರೆಗಳು ಹಾಗೂ ಒಂಟೆಗಳನ್ನು ನಾಟಕದಲ್ಲಿ ಬಳಸಲಾಗಿದ್ದು, ಕಥಾನಕಕ್ಕೆ ಇನ್ನಷ್ಟು ಜೀವಂತಿಕೆ ತುಂಬಿತ್ತು. ವೀಕ್ಷಕರನ್ನು 17ನೇ ಶತಮಾನಕ್ಕೆ ಹೋದಂತೆ ಮಾಡಿ, ಶಿವಾಜಿ ಪಟ್ಟಾಭಿಷೇಕವನ್ನು ಕಣ್ತುಂಬಿಕೊಳ್ಳುವಂತೆ ಕಲಾವಿದರು ಅಭಿನಯಿಸಿದ್ದಾರೆ.
ಬಿಎಚ್ಯುನ ಎಂಪಿ ಥಿಯೇಟರ್ ಮೈದಾನದಲ್ಲಿ ಛತ್ರಪತಿ ಶಿವಾಜಿ ಅವರ ಜೀವನಾಧಾರಿತ ಜನತಾ ರಾಜ ನಾಟಕವನ್ನು ಕಲಾವಿದರು ಪ್ರದರ್ಶಿಸಿದರು. ಮೊದಲ ದಿನ ಛತ್ರಪತಿ ಜೀವನದಿಂದ ಹಿಡಿದು ಪಟ್ಟಾಭಿಷೇಕದವರೆಗಿನ ಘಟನೆಗಳನ್ನು ಪ್ರದರ್ಶಿಸಲಾಯಿತು. ಮಹಾರಾಷ್ಟ್ರದ ಮೇಲೆ ಪಠಾಣರ ದಾಳಿಯೊಂದಿಗೆ ನಾಟಕ ಪ್ರಾರಂಭಗೊಂಡಿತ್ತು. ಅಲ್ಲಲ್ಲಿ ಪುರುಷ ಹಾಗೂ ಮಹಿಳಾ ಕಲಾವಿದರಿಂದ ಮರಾಠಿ ಜಾನಪದ ನೃತ್ಯ, ಲಾವಣಿಯ ಸಂಭ್ರಮವಿತ್ತು. ವಿಶೇಷವೆಂದರೆ ಈ ವೇಳೆ ಹಿಂದವಿ ಸ್ವರಾಜ್ ಘೋಷಣೆ ಎಲ್ಲರನ್ನು ರೋಮಾಂಚನಗೊಳಿಸಿತು.
ಶಿವಾಜಿಯ ಜನನ, ಶಿಕ್ಷಣ, ಯೋಧನಾಗುವ ಬಗೆ, ಬೆಳೆಯುತ್ತಾ ಹಿಂದವಿ ಸ್ವರಾಜ್ನ ಆಜ್ಞೆ ತೆಗೆದುಕೊಳ್ಳುವ ಶಿವಾಜಿ, ಕೊಂಕಣ ಸೇರಿ 84 ಬಂದರುಗಳನ್ನು ಶಿವಾಜಿ ವಶಪಡಿಸಿಕೊಳ್ಳುವ ಮೊದಲಾರ್ಧದಲ್ಲಿತ್ತು. ಮಧ್ಯಂತರದ ನಂತರ ಶಿವಾಜಿ ಶೈಸ್ತಾ ಖಾನ್ನ 1.25 ಲಕ್ಷ ಸೈನಿಕರನ್ನು ಸೋಲಿಸುವುದು, ನಂತರ ಶಿವಾಜಿಗೆ ಪಟ್ಟಾಭಿಷೇಕ- ಆ ಸಂದರ್ಭದ ವೈಭವದ ದೃಶ್ಯ ನಾಟಕದಲ್ಲಿತ್ತು. ಕಾಶಿಯಲ್ಲಿ 17ನೇ ಶತಮಾನವನ್ನು ಕಲಾವಿದರು ಸೇರಿ ಮತ್ತೆ ಜೀವಂತವಾಗಿಸಿದ್ದರು. ಮೊದಲ ದಿನ ಸುಮಾರು 10,000 ಜನರು ನಾಟಕವನ್ನು ವೀಕ್ಷಿಸಿದರು.