ವಾರಣಾಸಿ:ಭಾರತ ಕ್ರಿಕೆಟ್ ತಂಡದ ಬ್ಯಾಟರ್ ಚೇತೇಶ್ವರ ಪೂಜಾರ ಶನಿವಾರ ಕುಟುಂಬ ಸಮೇತರಾಗಿ ಕಾಶಿ ವಿಶ್ವನಾಥ ಧಾಮಕ್ಕೆ ಭೇಟಿ ನೀಡಿ ದರ್ಶನ ಪಡೆದರು. ಇದರ ನಂತರ ಐಎಂಎಸ್ ಬಿಎಚ್‌ಯು ನರವಿಜ್ಞಾನ ವಿಭಾಗಕ್ಕೆ ತೆರಳಿ ಪ್ರೊ.ವಿಜಯನಾಥ್ ಮಿಶ್ರಾ ಜೊತೆಗೂಡಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಿದರು. ಈ ಸಂದರ್ಭದಲ್ಲಿ ರೋಗಿಗಳು ಶೀಘ್ರ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ.
ಪೂಜಾರ ಆಗಮನದ ಸುದ್ದಿ ತಿಳಿದ ತಕ್ಷಣ ಆಸ್ಪತ್ರೆಯಲ್ಲಿ ಅವರನ್ನು ವೀಕ್ಷಿಸಲು ಜನಸಾಗರವೇ ನೆರೆದಿತ್ತು. ಸುಮಾರು ಎರಡು ಗಂಟೆಗಳ ಕಾಲ ಅಲ್ಲಿಯೇ ತಂಗಿದ್ದ ಪೂಜಾರ ಬಳಿಕ ಚಿತ್ರಕೂಟಕ್ಕೆ ಹೊರಟರು ಎಂದು ಬಿಎಚ್‌ಯು ನರವಿಜ್ಞಾನ ವಿಭಾಗದ ಅಧ್ಯಕ್ಷ ಪ್ರೊ.ವಿಜಯನಾಥ್ ಮಿಶ್ರಾ ತಿಳಿಸಿದ್ದಾರೆ.
ಚೇತೇಶ್ವರ್ ಪೂಜಾರ ಟೆಸ್ಟ್ ಸ್ಪೆಷಲಿಸ್ಟ್ ಎಂದೇ ಹೆಸರುವಾಸಿ. ಇತ್ತೀಚೆಗೆ ಅವರು ರಾಯಲ್ ಲಂಡನ್ ಏಕದಿನ ಕಪ್‌ನಲ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದಾರೆ. ರಾಯಲ್ ಲಂಡನ್ ಏಕದಿನ ಕಪ್‌ನಲ್ಲಿ ಪೂಜಾರ 9 ಪಂದ್ಯಗಳಲ್ಲಿ 111.62 ಸ್ಟ್ರೈಕ್ ರೇಟ್‌ನಲ್ಲಿ 624 ರನ್ ಗಳಿಸಿದ್ದರು.