ಕೊಚ್ಚಿ (ಕೇರಳ):ಭಾರತೀಯ ನೌಕಾಪಡೆಯ ಚೇತಕ್ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿ ಅಧಿಕಾರಿಯೊಬ್ಬರು ಸಾವನ್ನಪ್ಪಿ, ಇಬ್ಬರು ಗಾಯಗೊಂಡಿರುವ ಘಟನೆ ಕೇರಳದ ಕೊಚ್ಚಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ. ಇಲ್ಲಿನ ಐಎನ್‌ಎಸ್ ಗರುಡಾ ರನ್‌ವೇಯಲ್ಲಿ ಹೆಲಿಕಾಪ್ಟರ್ ಪತನಗೊಂಡು ಈ ದುರಂತ ಸಂಭವಿಸಿದೆ.
ಏಳು ಮಂದಿ ಕೂರಬಹುದಾದ ಚೇತಕ್ ಹೆಲಿಕಾಪ್ಟರ್‌ನಲ್ಲಿ ಈ ಘಟನೆ ವೇಳೆ ಪೈಲಟ್ ಸೇರಿ ಇಬ್ಬರು ಇದ್ದರು. ಇಂದು ಮಧ್ಯಾಹ್ನ 2.30ರ ಸುಮಾರಿಗೆ ನಿರ್ವಹಣಾ ಟ್ಯಾಕ್ಸಿ ತಪಾಸಣೆಯ ಸಮಯದಲ್ಲಿ ಹೆಲಿಕಾಪ್ಟರ್ ಹಾರಾಟ ರದ್ದು ಪಡಿಸುವಾಗ ರನ್‌ವೇಯಲ್ಲಿ ಪತನಗೊಂಡಿದೆ. ಈ ಸಂದರ್ಭದಲ್ಲಿ ರನ್‌ವೇಯಲ್ಲಿ ನಿಂತಿದ್ದಾಗ ಅಧಿಕಾರಿಯೊಬ್ಬರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಮೃತರನ್ನು ಮಧ್ಯಪ್ರದೇಶದ ಮೂಲದ ನಾವಿಕ ಯೋಗೇಂದ್ರ ಸಿಂಗ್ ಎಂದು ಗುರುತಿಸಲಾಗಿದೆ. ಇವರು ಪ್ರಮುಖ ಏರ್‌ಮನ್ ಆಗಿದ್ದರು. ಈ ಘಟನೆಯಲ್ಲಿ ಇತರ ಇಬ್ಬರು ಗಾಯಗೊಂಡಿದ್ದಾರೆ. ವಿಷಯ ತಿಳಿದು ನೌಕಾಪಡೆಯ ಅಧಿಕಾರಿಗಳು ಮತ್ತು ಕೊಚ್ಚಿ ಬಂದರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಅಪಘಾತಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಘಟನೆ ಕುರಿತು ತನಿಖೆ ಮಾಡಲು ನೌಕಾಪಡೆ ಆದೇಶಿಸಿದೆ.
ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ನೌಕಾಪಡೆ, ಕೊಚ್ಚಿಯ ಐಎನ್‌ಎಸ್ ಗರುಡಾದಲ್ಲಿ ನಿರ್ವಹಣಾ ಟ್ಯಾಕ್ಸಿ ತಪಾಸಣೆಯ ವೇಳೆ ಇಂದು ಚೇತಕ್ ಹೆಲಿಕಾಪ್ಟರ್ ನೆಲಕ್ಕೆ ಅಪ್ಪಳಿಸಿ ಅಪಘಾತಕ್ಕೀಡಾಗಿದೆ. ಇದರ ಪರಿಣಾಮವಾಗಿ ಸಿಬ್ಬಂದಿಯೊಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. ಈ ಅಪಘಾತದ ಕಾರಣವನ್ನು ತನಿಖೆ ಮಾಡಲು ತನಿಖಾ ಮಂಡಳಿಗೆ ಆದೇಶಿಸಲಾಗಿದೆ ಎಂದು ಹೇಳಿದೆ.