ಚೆನ್ನೈ(ತಮಿಳುನಾಡು):ಇಂದಿನ ಆಧುನಿಕ ಯುಗದಲ್ಲಿ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ನಾನಾ ರೀತಿಯ ಸಾಧನೆ ಮಾಡುತ್ತಿದ್ದಾರೆ. ಅದೇ ರೀತಿ ಸಮಾಜದಲ್ಲಿ ಕೆಲವರಿಂದ ಕಡೆಗಣಿಸಲ್ಪಡುವ ತೃತೀಯ ಲಿಂಗಿಗಳು ನಾವೂ ಸಾಧಿಸಬಲ್ಲೆವು ಎಂದು ಜಗತ್ತಿಗೆ ಅರಿವು ಮೂಡಿಸುತ್ತಿರುವುದನ್ನು ದಿನನಿತ್ಯದ ಸುದ್ದಿಗಳ ಮೂಲಕ ತಿಳಿದುಕೊಳ್ಳುತ್ತಿದ್ದೇವೆ. ಅವರ ಅಭಿವೃದ್ಧಿಗಾಗಿ ಸರ್ಕಾರ ಶಿಕ್ಷಣ, ಉದ್ಯೋಗ ಮತ್ತು ಸಾಲದಂತಹ ನೆರವು ನೀಡುತ್ತಿದೆ. ಈ ಸಂದರ್ಭದಲ್ಲಿ ಮಂಗಳಮುಖಿಯರು ಕೊಳತ್ತೂರ್ನಲ್ಲಿ ಖಾಸಗಿ ಚಾರಿಟಬಲ್ ಸಂಸ್ಥೆಯ (ಯುನೈಟೆಡ್ ವೇ ಚೆನ್ನೈ) ಬೆಂಬಲದೊಂದಿಗೆ "ಟ್ರಾನ್ಸ್ ಕಿಚನ್" ಎಂಬ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದ್ದಾರೆ. 'ಕೇವಲ ಕೆಲಸಗಾರರಾಗುವ ಬದಲು ಉದ್ಯೋಗದಾತರಾಗಬಹುದು' ಎಂಬ ಆಶಯದೊಂದಿಗೆ ಈ ರೆಸ್ಟೋರೆಂಟ್ ಅನ್ನು ತೆರೆಯಲಾಗಿದೆ.
ನಗರದ ಕೊಳತ್ತೂರಿನ ಜಿಕೆಎಂ ಕಾಲೋನಿಯ 25ನೇ ರಸ್ತೆಯಲ್ಲಿರುವ ಈ ರೆಸ್ಟೊರೆಂಟ್‌ನಲ್ಲಿ ಬೆಳಗ್ಗೆಉಪಹಾರ, ಮಧ್ಯಾಹ್ನ ಬಿರಿಯಾನಿ ಮತ್ತು ಊಟ ನೀಡಲಾಗುತ್ತಿದೆ. ಈ ರೆಸ್ಟೋರೆಂಟ್‌ನಲ್ಲಿ 5 ತೃತೀಯ ಲಿಂಗಿಗಳು ಸೇರಿದಂತೆ ಒಟ್ಟು 10 ಜನರು ಕೆಲಸ ಮಾಡುತ್ತಿದ್ದಾರೆ. ಅಡುಗೆ ಮಾಡುವ ತರಬೇತಿಗೆ ಸಂಬಂಧಿಸಿದಂತೆ, ಆಹಾರ ಉದ್ಯಮದಲ್ಲಿ ಆಸಕ್ತಿ ಹೊಂದಿರುವ ತೃತೀಯ ಲಿಂಗಿಗಳನ್ನು ಆಯ್ಕೆ ಮಾಡಿ ಮೂರು ತಿಂಗಳ ಕಾಲ ವಿಶೇಷ ತರಬೇತಿಯನ್ನು ನೀಡಲಾಗುತ್ತದೆ. ನಂತರ ಅವರು ರೆಸ್ಟೋರೆಂಟ್‌ಗೆ ಸೇರುತ್ತಾರೆ. ಇದಕ್ಕಾಗಿ ಸೈದಾಪೇಟೆಯಲ್ಲಿ ವಿಶೇಷ ತರಬೇತಿ ಕಾರ್ಯಾಗಾರ ನಡೆಸಲಾಗುತ್ತಿದೆ.
ಆಹಾರ ಕ್ಷೇತ್ರದಲ್ಲೂ ಸಾಧನೆ ಮಾಡುವ ಉದ್ದೇಶ: 'ಈಟಿವಿ ಭಾರತ'ದೊಂದಿಗೆ ಮಾತನಾಡಿದ ಚೆನ್ನೈನ ಟ್ರಾನ್ಸ್ ಪರ್ಸನ್ಸ್ ರೈಟ್ಸ್ ಅಸೋಸಿಯೇಷನ್‌ನ ಸಂಸ್ಥಾಪಕ ಮತ್ತು ನಿರ್ದೇಶಕಿ ಜೀವಾ, 'ಲಿಂಗಾಂತರಿಗಳೆಂದರೆ ಸೆಕ್ಸ್ ವರ್ಕ್ ಎಂಬುದು ಜನರ ದೃಷ್ಟಿಕೋನ. ಅದನ್ನು ಬದಲಾಯಿಸಲು ಕೊಯಮತ್ತೂರು ಮತ್ತು ಮಧುರೈನಲ್ಲಿ 'ಟ್ರಾನ್ಸ್ ಕಿಚನ್' ಅನ್ನು ಮೊದಲು ಪ್ರಾರಂಭಿಸಲಾಯಿತು. ಇದರಲ್ಲಿ ಕೆಲಸ ಮಾಡುವ ತೃತೀಯ ಲಿಂಗಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ. ಸಾಮಾನ್ಯ ಜನರೊಂದಿಗೆ ಉತ್ತಮ ಬಾಂಧವ್ಯ ಹೊಂದಲು ಈ ರೀತಿ ರೆಸ್ಟೋರೆಂಟ್ ತೆರೆದಿದ್ದೇವೆ. ಅಷ್ಟೇ ಅಲ್ಲ, ಟ್ರಾನ್ಸ್‌ಜೆಂಡರ್‌ಗಳು ಈಗಾಗಲೇ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಆಹಾರ ಕ್ಷೇತ್ರದಲ್ಲೂ ಸಾಧನೆ ಮಾಡುವ ಉದ್ದೇಶದಿಂದ ಇದನ್ನು ಆರಂಭಿಸಲಾಗಿದೆ' ಎಂದರು.
ಇದನ್ನೂ ಓದಿ:ಬಾಲಿವುಡ್ ಡ್ಯಾನ್ಸ್ನತ್ತ ಮಂಗಳಮುಖಿಯರ ಆಕರ್ಷಣೆ.. ಮಂಗಳೂರಿನಲ್ಲಿ ನಿತ್ಯ ತರಬೇತಿ