ಚೆನ್ನೈ (ತಮಿಳುನಾಡು): ಜೂನ್ 20 ರಂದು ಹೊರಡಿಸಲಾದ ತಮಿಳುನಾಡು ಸರ್ಕಾರದ ಲಾಕ್‌ಡೌನ್ ಮಾರ್ಗಸೂಚಿಗಳಿಗೆ ಅನುಸಾರವಾಗಿ ಚೆನ್ನೈ ಉಪನಗರ (ಸಬ್ ಅರ್ಬನ್) ರೈಲು ಸೇವೆಯನ್ನು ಪುನಾರಂಭಿಸುವಂತೆ ದಕ್ಷಿಣ ರೈಲ್ವೆ ಘೋಷಿಸಿದೆ. ಇಂದಿನಿಂದ ಸಬ್ ಅರ್ಬನ್ ರೈಲುಗಳು ಸೀಮಿತ ಪ್ರಯಾಣಿಕರ ಸಾಮರ್ಥ್ಯದೊಂದಿಗೆ ಸಂಚಾರ ನಡೆಸಲಿವೆ.
ಇಂದಿನಿಂದ ಕಠಿಣ ನಿಯಮಗಳೊಂದಿಗೆ ಚೆನ್ನೈ ಸಬ್ ಅರ್ಬನ್ ರೈಲು ಸೇವೆ ಪುನಾರಂಭ - ತಮಿಳುನಾಡು ಲಾಕ್‌ಡೌನ್
ಕೇವಲ ಮುಂಚೂಣಿ ಕಾರ್ಮಿಕರಿಗೆ ಮಾತ್ರ ಚೆನ್ನೈ ಉಪನಗರ ರೈಲುಗಳಲ್ಲಿ ಸಂಚರಿಸಲು ಅವಕಾಶ ನೀಡಿದ್ದ ತಮಿಳುನಾಡು ಸರ್ಕಾರ ಇಂದಿನಿಂದ ನಿರ್ದಿಷ್ಟ ವರ್ಗದ ಪ್ರಯಾಣಿಕರೊಂದಿಗೆ ಸಬ್ ಅರ್ಬನ್ ರೈಲು ಸೇವೆ ಪುನಾರಂಭಿಸುತ್ತಿದೆ.
ಚೆನ್ನೈ ಸಬ್ ಅರ್ಬನ್ ರೈಲು ಸೇವೆ ಪುನಾರಂಭ
ಕೋವಿಡ್ ಎರಡನೇ ಅಲೆ ಉಲ್ಬಣಗೊಂಡ ಕಾರಣ ಲಾಕ್‌ಡೌನ್ ಘೋಷಿಸಿದ್ದ ತಮಿಳುನಾಡು ಸರ್ಕಾರ ಉಪನಗರ ರೈಲು ಸೇವೆಯನ್ನು ಸ್ಥಗಿತಗೊಳಿಸಿತ್ತು. ಕೋವಿಡ್ ಹೋರಾಟದಲ್ಲಿನ ಮುಂಚೂಣಿ ಕಾರ್ಮಿಕರಿಗಾಗಿ ಮಾತ್ರ ಕೆಲವೇ ರೈಲುಗಳು ಸಂಚರಿಸಲು ಅವಕಾಶ ಮಾಡಿಕೊಟ್ಟಿತ್ತು. ಆದರೆ ಇದೀಗ ಕಠಿಣ ನಿಯಮಗಳೊಂದಿಗೆ ನಿರ್ದಿಷ್ಟ ವರ್ಗದ ಪ್ರಯಾಣಿಕರಿಗೆ ಸಂಚಾರಕ್ಕೆ ಅನುಮತಿ ನೀಡಿದೆ. ಆ ನಿಯಮಗಳು ಈ ಕೆಳಕಂಡಂತಿವೆ.
- ರೈಲ್ವೆ ನಿಲ್ದಾಣದ ಆವರಣ ಅಥವಾ ರೈಲಿನಲ್ಲಿ ಮಾಸ್ಕ್ ಇಲ್ಲದೇ ಪ್ರವೇಶಿಸಿದವರಿಗೆ 500 ರೂ. ದಂಡ
- ರೈಲುಗಳು ಹತ್ತುವಾಗ, ಇಳಿಯುವಾಗ ಜನಸಂದಣಿಯಾಗದಂತೆ ಕ್ರಮ
- ಅಗತ್ಯಕ್ಕೆ ಅನುಗುಣವಾಗಿ ವಿಶೇಷ ಟಿಕೆಟ್ಗಳೊಂದಿಗೆ ಎಲ್ಲಾ ಮಹಿಳೆಯರಿಗೆ ರೈಲುಗಳಲ್ಲಿ ಪ್ರಯಾಣಿಸಲು ಅವಕಾಶ
- ಮಹಿಳಾ ಪ್ರಯಾಣಿಕರೊಂದಿಗೆ ಹೋದರೆ ಮಾತ್ರ 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ರೈಲು ಹತ್ತಬಹುದು
- ಸರ್ಕಾರಿ ಹಾಗೂ ಖಾಸಗಿ ನೌಕರರು ತಮ್ಮ ಗುರುತಿನ ಚೀಟಿ ತೋರಿಸಿ ಸಂಚರಿಸಬಹುದು
- ಮೇಲ್ ಅಥವಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಬೆಳೆಸುವವರಿಗೆ ಸಿಂಗಲ್ ಟಿಕೆಟ್ ನೀಡಲಾಗುತ್ತದೆ. ಇವರು ಒನ್ ವೇ ಜರ್ನಿ ಮಾತ್ರ ಮಾಡಬಹುದು
- ಈ ಮೇಲಿನ ಎರಡು ಕೆಟಗರಿ ಹೊರತುಪಡಿಸಿ, ಪುರುಷರು ಬೆಳಗ್ಗೆ 7 ರಿಂದ ಸಂಜೆ 7 ಗಂಟೆಯ ವರೆಗೆ ಮಾತ್ರ ರೈಲಿನಲ್ಲಿ ಸಂಚರಿಸಬಹುದು
- ಕೋವಿಡ್ ಸೋಂಕಿತರು ಅಥವಾ ಲಕ್ಷಣವುಳ್ಳವರಿಗೆ ಪ್ರಯಾಣ ನಿಷಿದ್ಧ
ತಮಿಳುನಾಡಿನಲ್ಲಿ ಈವರೆಗೆ 24.4 ಲಕ್ಷ ಕೊರೊನಾ ಪ್ರಕರಣಗಳು ವರದಿಯಾಗಿದ್ದು, 31,746 ಜನರು ಮೃತಪಟ್ಟಿದ್ದಾರೆ. ಜೂನ್ 28ರವರೆಗೆ ಲಾಕ್‌ಡೌನ್ ಜಾರಿಯಲ್ಲಿದೆ.